ಮನೋರಂಜನೆ

‘ಬೆಂಗಳೂರು 69’ ಚಿತ್ರಕ್ಕೆ ಯೂರೋಪ್ ಬೆಲ್ಲಿ ಡ್ಯಾನ್ಸರ್.!

Pinterest LinkedIn Tumblr


ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟಿಸುತ್ತಿರುವ ‘ಬೆಂಗಳೂರು 69’ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದ್ದು ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

ಕನ್ನಡದ ಆರ್ ಜಿವಿ (RGV) ಎಂದೇ ಹೆಸರಾಗುತ್ತಿರುವ ನಿರ್ಮಾಪಕ ಝೀಕೆ (ZK) ಮತ್ತೆ ಸುದ್ದಿಯಾಗುತ್ತಿದ್ದಾರೆ. ಬೆಂಗಳೂರು 69 ಚಿತ್ರಕ್ಕಾಗಿ ಇತ್ತೀಚೆಗೆ ಕಬಿನಿ ರೆಸಾರ್ಟನಲ್ಲಿ ಬಹಳ ವಿಭಿನ್ನವಾಗಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ಝಾಕೀರ್ ಹುಸೇನ್ ಕರೀಂಖಾನ್ ಇದೀಗ ಮತ್ತೊಂದು ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಚಿತ್ರೀಕರಿಸಿದ್ದು ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರತಂಡ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾ ಬಳಿಯ ರೆಡ್‍ಝೋನ್ ಹಾಗೂ ಶಾರ್ಜಾ ಮರುಭೂಮಿ ಬಳಿ ಚಿತ್ರೀಕರಣ ನಡೆಸಿದೆ. ಈ ಶೂಟಿಂಗ್‍ನಲ್ಲಿ ಯೂರೋಪ್‍ನ ಖ್ಯಾತ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ಭಾಗವಹಿಸಿದ್ದರು.

ಇದೇ ಮೊದಲ ಬಾರಿಗೆ ಗ್ರೆಸಿಲ್ಲಾ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಎಷ್ಟೋ ಬಾಲಿವುಡ್ ನಿರ್ಮಾಪಕರು ಗ್ರೆಸಿಲ್ಲಾ ಡೇಟ್ಸ್ ಕೇಳಿದರೂ ಆಕೆ ಒಪ್ಪಿರಲಿಲ್ಲ. ಆದರೆ ಬೆಂಗಳೂರು 69 ಚಿತ್ರದ ಕಥೆ ಕೇಳಿ ಖುಷಿಯಿಂದ ಒಪ್ಪಿ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಮೆರಿಕದ ಕಾಸ್ಟ್ಯೂಮ್ ಡಿಸೈನರ್, ಗ್ರೆಸಿಲ್ಲಾ ಡ್ಯಾನ್ಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಒಂದು ವಿಶೇಷ ಡ್ಯಾನ್ಸ್ ಗೆ ಇನ್ನೂ ಹೆಚ್ಚಿನ ಮೆರುಗು ತರಲು ನಿರ್ಮಾಪಕ ಝಾಕೀರ್ ಹುಸೇನ್ ಕರೀಂಖಾನ್ ಅವರು ಲ್ಯಾಟಿನ್ ಅಮೆರಿಕದ ಕೊರಿಯೋಗ್ರಾಫರ್ ಹಾಗೂ ರಷ್ಯಾ, ಸೌತ್ ಆಫ್ರಿಕಾ ತಂತ್ರಜ್ಞರನ್ನು ಚಿತ್ರಕ್ಕಾಗಿ ಕರೆತಂದಿದ್ದಾರೆ.

ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂಖಾನ್ ಅವರ ಪತ್ನಿ ಗುಲ್ಜಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪರಮೇಶ್ ಛಾಯಾಗ್ರಹಣವಿದ್ದು, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

Comments are closed.