ಮನೋರಂಜನೆ

3 ದಿನದಲ್ಲಿ 60 ಕೋಟಿ ಗಳಿಸಿದ ‘ತಾನಾಜಿ’

Pinterest LinkedIn Tumblr


ಮುಂಬಯಿ: ಶುಕ್ರವಾರ ತೆರೆಕಂಡ ಎರಡು ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳ ಪೈಕಿ ಒಂದು ಚಿತ್ರ ದಾಖಲೆಯ ಕಲೆಕ್ಷನ್ ನೊಂದಿಗೆ ಮುನ್ನುಗ್ಗುತ್ತಿದ್ದರೆ ಇನ್ನೊಂದು ಚಿತ್ರ ಕಾರಣವಲ್ಲದೆ ಕಾರಣಕ್ಕಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಗ್ಗರಿಸುವ ಲಕ್ಷಣ ಕಾಣಿಸುತ್ತಿದೆ.

ಅಜಯ್ ದೇವಗನ್ ಅಭಿನಯದ ನೂರನೇ ಚಿತ್ರವಾಗಿ ತೆರೆಗೆ ಬಂದ ತಾನಾಜಿ: ದಿ ಅನ್ ಸಂಗ್ ವಾರಿಯರ್ ಆದಿತ್ಯವಾರ ದೇಶಾದ್ಯಂತ 26.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ತಾನಾಜಿ ಚಿತ್ರ ಬಿಡುಗಡೆಗೊಂಡ ಮೂರೇ ದಿನದಲ್ಲಿ 61.75 ಕೋಟಿ ರೂ. ಗಳಿಸುವ ಮೂಲಕ ಗೆಲುವಿನ ಹಾದಿಯಲ್ಲಿದೆ.

ಮರಾಠ ದೊರೆ ಛತ್ರಪತಿ ಶಿವಾಜಿ ಕಾಲದ ಘಟನೆಯೊಂದನ್ನು ಆಧರಿಸಿ ತಯಾರಿಸಲಾಗಿರುವ ಈ ಐತಿಹಾಸಿಕ ಚಿತ್ರದಲ್ಲಿ ಅಜಯ್ ದೇವಗನ್ ಅವರು ತಾನಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಸೈಫ್ ಅಲಿ ಖಾನ್ ಮತ್ತು ಕಾಜೊಲ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ತಾನಾಜಿ ಚಿತ್ರದ ಜೊತೆಯಲ್ಲೇ ಬಿಡುಗಡೆಗೊಂಡ ದೀಪಿಕಾ ಪಡುಕೋಣೆ ಅವರ ವಿಭಿನ್ನ ಪ್ರಯತ್ನದ ‘ಛಪಾಕ್’ ಚಿತ್ರ ಮಾತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಗ್ಗರಿಸಿದೆ. ಶುಕ್ರವಾರ ಈ ಚಿತ್ರ 4.77 ಕೋಟಿ ರೂ. ಗಳಿಸಿದ್ದರೆ, ಶನಿವಾರ 6.90 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ರಜಾದಿನವಾದ ಆದಿತ್ಯವಾರವೂ ಛಪಾಕ್ ಚಿತ್ರ ಪ್ರೇಕ್ಷಕರನ್ನು ಥಿಯೇಟರ್ ಗೆ ಸೆಳೆಯುವಲ್ಲಿ ವಿಫಲವಾಗಿದೆ. ಆದಿತ್ಯವಾರ ಈ ಚಿತ್ರದ ಕಲೆಕ್ಷನ್ 7.35 ಕೋಟಿ ರೂಪಾಯಿಗಳಷ್ಟೇ. ಮೂರು ದಿನಗಳಲ್ಲಿ ಛಪಾಕ್ ಗಳಿಸಿದ ಒಟ್ಟು ಮೊತ್ತ 19.02 ಕೋಟಿ ರೂಪಾಯಿಗಳು ಮಾತ್ರ.

ದೇಶಾದ್ಯಂತ ತಾನಾಜಿಯ ಅಬ್ಬರ ಒಂದು ಮಟ್ಟದ್ದಾಗಿದ್ದರೆ ಮಹಾರಾಷ್ಟ್ರದಲ್ಲಿ ಮಾತ್ರ ತಾನಾಜಿ ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿ ಮುನ್ನುಗ್ಗುತ್ತಿದೆ. ಮರಾಠರ ಪ್ರತಿಷ್ಠೆ ಎಂಬಂತೆ ಮಹಾ ಜನತೆ ಈ ಚಿತ್ರವನ್ನು ಸ್ವೀಕರಿಸಿರುವುದು ಇದರ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದಲೇ ಗೊತ್ತಾಗುತ್ತಿದೆ.

ತಾನಾಜಿ ಚಿತ್ರ ಶುಕ್ರವಾರ ಬಿಡುಗಡೆಗೊಂಡಿತ್ತು ಮತ್ತು ಆ ದಿನ 15.10 ಕೋಟಿ ರೂ. ಗಳಿಸಿತ್ತು, ಇನ್ನು ಶನಿವಾರ ಈ ಚಿತ್ರದ ಕಲೆಕ್ಷನ್ 20.57 ಕೋಟಿಗೇರಿದ್ದರೆ ಆದಿತ್ಯವಾರ ತಾನಾಜಿ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 26.08 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.

ಕಳೆದ ವರ್ಷ ಬಿಡುಗಡೆಗೊಂಡಿದ್ದ ದೇವಗನ್ ಅಭಿನಯದ ‘ಟೋಟಲ್ ಧಮಾಲ್’ ಚಿತ್ರವೂ ಸಹ ಮೂರು ದಿನದಲ್ಲಿ 62.40 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು. ಇದರೊಂದಿಗೆ ‘ದೇ ದೇ ಪ್ಯಾರ್ ದೇ’ ಎಂಬ ಹಿಟ್ ಚಿತ್ರವನ್ನೂ ಸಹ ಅಜಯ್ ದೇವಗನ್ ಕಳೆದ ವರ್ಷ ನೀಡಿದ್ದರು.

Comments are closed.