ಮನೋರಂಜನೆ

ಪ್ರೀತಿ ಅರಸಿ ಬಂದ ಪ್ರಿಯತಮ- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಿರುತೆರೆ ನಟಿ

Pinterest LinkedIn Tumblr


ಚೆನ್ನೈ: ಕಿರುತೆರೆ ಕಲಾವಿದೆಯೊಬ್ಬಳು ತನ್ನ ಪ್ರೀತಿ ಅರಸಿ ಬಂದಿದ್ದ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಸುತ್ತಿಗೆ ಹಾಗೂ ದೊಣ್ಣೆಯಿಂದ ಆತನ ತಲೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕೃತ್ಯವೆಸೆಗಿದ ಕಿರುತೆರೆ ಕಲಾವಿದೆಯನ್ನು ಎಸ್. ದೇವಿ(42) ಎಂದು ಗುರುತಿಸಲಾಗಿದ್ದು, ಈಕೆ ಹಲವು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾಳೆ. ಈಕೆ ತನ್ನ ಪತಿ ಶಂಕರ್, ತಂಗಿ ಲಕ್ಷ್ಮಿ(40), ತಂಗಿ ಪತಿ ಸಾವರಿಯಾರ್(53) ಸಹಾಯದಿಂದ ಫಿಲಂ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂ ರವಿ(38) ಅನ್ನು ಬರ್ಬರವಾಗಿ ಕೊಲೆಗೈದಿದ್ದಾಳೆ.

ರವಿ ಮಧುರೈ ಮೂಲದವನಾಗಿದ್ದು ಕಳೆದ 8 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿದ್ದನು. ದೇವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ವೇಳೆ ರವಿ ಹಾಗೂ ಆಕೆ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಕಳೆದ 2 ವರ್ಷದ ಹಿಂದೆ ದೇವಿ ಪತಿ ಶಂಕರ್ ಗೆ ತಿಳಿದು ರವಿಯಿಂದ ಆಕೆಯನ್ನು ದೂರ ಮಾಡಿದ್ದನು.

ಆ ಬಳಿಕ ದೇವಿಗೆ ಪತಿ ಹೊಲಿಗೆ ಮಷಿನ್ ತಂದು ಕೊಟ್ಟು ಆಕೆ ಬಟ್ಟೆ ಹೊಲಿಯುವುದರಲ್ಲಿ ಬ್ಯುಸಿಯಾಗುವಂತೆ ಮಾಡಿದನು. ಇತ್ತ ತಾನು ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದನು. ಹೀಗೆ ಇಬ್ಬರು ಜೀವನ ನಡೆಸುತ್ತಿದ್ದರು.

ಆದರೆ ದೇವಿ ಬಗ್ಗೆ ತಿಳಿಯದೆ ರವಿ ನೊಂದಿದ್ದನು. ಸೋಮವಾರ ಲಕ್ಷ್ಮಿ ಮನೆಗೆ ಬಂದು ದೇವಿ ಬಗ್ಗೆ ವಿಚಾರಿಸಿದ್ದನು. ನಾನು ದೇವಿ ಒಂದಾಗಲು ಸಹಾಯ ಮಾಡು ಎಂದು ಲಕ್ಷ್ಮಿ ಬಳಿ ಕೇಳಿಕೊಂಡಿದ್ದನು. ಹೀಗಾಗಿ ಲಕ್ಷ್ಮಿ ದೇವಿ, ಶಂಕರ್ ಹಾಗೂ ತನ್ನ ಪತಿಗೆ ವಿಷಯ ತಿಳಿಸಿ ಮನೆಗೆ ಬರಲು ಹೇಳಿದಳು.

ಮನೆಗೆ ಎಲ್ಲರೂ ಬಂದ ಮೇಲೆ ದೇವಿಯನ್ನು ಬಿಟ್ಟುಬಿಡು ಎಂದು ಶಂಕರ್, ಲಕ್ಷ್ಮಿ ಹಾಗೂ ಆಕೆಯ ಪತಿ ತಿಳಿ ಹೇಳಿದರೂ ರವಿ ಕೇಳಿರಲಿಲ್ಲ. ದೇವಿ ನನಗೆ ಬೇಕು ಎಂದು ರವಿ ಪಟ್ಟು ಹಿಡಿದು ಕುಳಿತಿದ್ದನು. ಈ ವೇಳೆ ಅವರ ನಡುವೆ ಮತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

ರವಿ ತಮ್ಮ ಮಾತು ಕೇಳದಿದ್ದಾಗ ದೇವಿ ಹಾಗೂ ಆಕೆಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದು, ಕೈಗೆ ಸಿಕ್ಕ ಸುತ್ತಿಗೆ ಹಾಗೂ ದೊಣ್ಣೆಯಿಂದ ರವಿಯ ತಲೆಗೆ ಬಲವಾಗಿ ಹೊಡೆದು ಆತನನ್ನು ಕೊಲೆ ಮಾಡಿದ್ದಾರೆ. ಬಳಿಕ ದೇವಿಗೆ ತನ್ನ ತಪ್ಪಿನ ಅರಿವಾಗಿದ್ದು ಪೊಲೀಸರಿಗೆ ಶರಣಾಗಿದ್ದಾಳೆ. ಅಲ್ಲದೆ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಿ ತಪ್ಪೊಪ್ಪಿಕೊಂಡಿದ್ದಾಳೆ.

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ರವಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ರವಿ ಸಾವನ್ನಪ್ಪಿದ್ದನು. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments are closed.