ಮನೋರಂಜನೆ

2019ರಲ್ಲಿ ಸ್ಯಾಂಡಲ್ ವುಡ್ ನ್ನು ತಿರುಗಿ ನೋಡಿದ ದೇಶದ ಚಿತ್ರರಂಗ

Pinterest LinkedIn Tumblr

2019 ಕನ್ನಡ ಸಿನಿಮಾಗಳಿಗೆ ಹೊಸ ರೂಪು ನೀಡಿತು ಎಂದ್ರೆ ಸುಳ್ಳಾಗಲ್ಲ. ಕರ್ನಾಟಕದ ಮಾರುಕಟ್ಟೆಗೆ ಸೀಮಿತಗೊಂಡಿದ್ದ ಚಂದನವನನ್ನ ಇಂದು ಇಡೀ ಭಾರತವೇ ತಿರುಗಿ ನೋಡುತ್ತಿದೆ. ಇಂದು ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕನ್ನಡ ಸ್ಟಾರ್ ಗಳನ್ನು ಇಂದು ಗುರುತಿಸುವಂತಾಗಿದೆ. ಇದೆಕ್ಕೆಲ್ಲಾ ಕಾರಣ ಪ್ಯಾನ್ ಇಂಡಿಯಾ ಕಾನ್ಸೆಪ್ಟ್.

ಹೌದು, ಮೊದಲಿಗೆ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆದ್ರೆ ಅದು ಕೇವಲ ಕರ್ನಾಟಕದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು. ಇಂದು ಕನ್ನಡದ ಸಿನಿಮಾಗಳು ಗಡಿಯನ್ನು ದಾಟಿ ವಿದೇಶದಲ್ಲಿ ನಮ್ಮ ಚಂದನವನದ ಪರಿಮಳವನ್ನು ಪಸರಿಸಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ 2018 ಡಿಸೆಂಬರ್ 21ರಂದು ತೆರೆಕಂಡಿತ್ತು. ಈ ಕನ್ನಡದ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗ ಒಪ್ಪಿ, ಅಪ್ಪಿಕೊಂಡು ಮುದ್ದಾಡಿದೆ. ಕೆಜಿಎಫ್ ಎಂಬ ದೈತ್ಯ ಸಿನಿಮಾ ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸಿತು. ಕೆಜಿಎಫ್ ಬಳಿಕ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಅಳವಡಿಸಿಕೊಳ್ಳಲು ಮುಂದಾದವು.

ಸೆಪ್ಟೆಂಬರ್ 12ರಂದ ಬಿಡುಗಡೆಯಾದ ಸ್ಯಾಂಡಲ್‍ವುಡ್ ಸ್ವಾತಿಮುತ್ತು ಸುದೀಪ್ ಅಭಿನಯದ ‘ಪೈಲ್ವಾನ್’ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆಕಂಡಿತು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಪೈಲ್ವಾನ್ ಹೊಡೆದ ಸೆಡ್ಡು ಎಲ್ಲರನ್ನು ನಡಗುವಂತೆ ಮಾಡಿತ್ತು. ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪೈಲ್ವಾನ್ ನಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದು ಈ ಚಿತ್ರದ ಮತ್ತೊಂದು ವಿಶೇಷ. 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪೈಲ್ವಾನ್ ಅಂದಾಜು 113 ಕೋಟಿಗೂ ಅದಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಕೊಂಡಿತ್ತು.

ಇದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಸಹ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಆಗಸ್ಟ್ 9ರಂದು ಬಿಡುಗಡೆಗೊಂಡಿತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ವಿಷಯಗಳಿಗೆ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿತ್ತು. ದರ್ಶನ್, ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸೋನು ಸೂದ್ ದೊಡ್ಡ ತಾರಾಬಳಗವನ್ನೇ ಸಿನಿಮಾ ಹೊಂದಿತ್ತು. ಮುನಿರತ್ನ ಕುರುಕ್ಷೇತ್ರ ಸಿನಿಮಾ ಸಹ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ಬಳಿಕ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ಅವನೇ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಕ್ರೇಜ್ ಹುಟ್ಟಿಸಿರೋ ಅವನೇ ಶ್ರೀಮನ್ನಾರಾಯಣ ಸಹ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಥೀಮ್ ನಲ್ಲಿ ರಿಲೀಸ್ ಆಗಲು ಭರ್ಜರಿ ತಯಾರಿ ನಡೆಸಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ.

Comments are closed.