
ನವದೆಹಲಿ(ಡಿ. 25): ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಿರಂತರ ಪ್ರತಿಭಟನೆಗಳು ನಡೆದಿವೆ. ಕೆಲ ಪ್ರದೇಶಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಾಕಷ್ಟು ಸರ್ಕಾರಿ ಆಸ್ತಿಪಾಸ್ತಿಗಳಿಗೆ ನಷ್ಟವಾಗಿದ್ದಿದೆ. ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಪ್ರಮಾಣ ಹಾಗೂ ಪೊಲೀಸರ ಗೋಲಿಬಾರ್ನಿಂದ ಮಡಿದವರ ಪ್ರಮಾಣ ತುಸು ಹೆಚ್ಚೇ ಇದೆ. ಪೊಲೀಸರ ಗೋಲಿಬಾರ್ ಕ್ರಮವನ್ನು ಖಂಡಿಸಿ ಪ್ರತಿಭಟನಾಕಾರರ ಪರವಾಗಿ ಬೆಂಬಲ ಒಂದು ಕಡೆ ವ್ಯಕ್ತವಾಗುತ್ತಿದೆ. ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿರುವುದಕ್ಕೆ ವಿರೋಧ ಅಭಿಪ್ರಾಯವೂ ಇನ್ನೊಂದೆಡೆ ಬರುತ್ತಿದೆ. ಈ ಮಧ್ಯೆ, ಉತ್ತರ ಪ್ರದೇಶ ಸರ್ಕಾರವು ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರ ಮೇಲೆ ವಿಶೇಷ ಕ್ರಮ ಜರುಗಿಸಲು ಮುಂದಾಗುತ್ತಿದೆ. ಹಿಂಸಾಚಾರದಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಿದವರನ್ನು ಗುರುತಿಸಿ ಅವರಿಂದ ಹಾನಿಗೆ ಪರಿಹಾರ ಹಣ ವಸೂಲಿ ಮಾಡುತ್ತಿದೆ.
ಕಾನಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ 14.86 ಲಕ್ಷ ಹಣ ಮೌಲ್ಯದಷ್ಟು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭೋತ್ ಪೊಲೀಸ್ ಠಾಣೆಗೆ ಸೇರಿದ 7.5 ಲಕ್ಷ ಮೌಲ್ಯದ ಜೀಪ್, ಎಸ್ಐವೊಬ್ಬರಿಗೆ ಸೇರಿದ 65 ಸಾವಿರ ರೂ ಮೌಲ್ಯದ ಬೈಕ್, ಸಿಟಿ ಕೋತವಲಿ ಪೊಲೀಸ್ ಠಾಣೆಗೆ ಸೇರಿದ 90 ಸಾವಿರ ಮೌಲ್ಯದ ಒಂದು ವಾಹನ, ವೈರ್ಲೆಸ್ ಸೆಟ್, ಲೌಡ್ ಸ್ಪೀಕರ್, 10 ಬೆತ್ತ, 3 ಹೆಲ್ಮೆಟ್, 3 ದೇಹರಕ್ಷಕ ಕವಚ ಮತ್ತಿತರ ವಸ್ತುಗಳು ಹಾನಿಗೊಳಗಾದ ಪಟ್ಟಿಯಲ್ಲಿವೆ.
ಈ ಹಿಂಸಾಚಾರ ಘಟನೆಗಳಲ್ಲಿ 28 ಜನರನ್ನು ಗುರುತಿಸಿ ಘಟನೆಯ ಜವಾಬ್ದಾರಿ ಹೊರಿಸಲಾಗಿದೆ. 14.86 ಲಕ್ಷ ರೂಪಾಯಿಯನ್ನು ನೀವೇ ಭರಿಸಬೇಕೆಂದು ತಿಳಿಸಿ ಈ 28 ಮಂದಿಗೆ ಕಾನಪುರ ಜಿಲ್ಲಾಡಳಿತ ನೋಟೀಸ್ ನೀಡಿದೆ.
ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಧಾರದ ಮೇಲೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಗಲಭೆಕೋರರಿಂದಲೇ ನಷ್ಟ ಭರಿಸುವ ಕ್ರಮ ಜರುಗಿಸಲು ಆದೇಶ ಹೊರಡಿಸಿದೆ. ಅದರಂತೆ ಕಾನಪುರ ಜಿಲ್ಲಾಡಳಿತವು ಈ 28 ಮಂದಿಗೆ ನೋಟೀಸ್ ಹೊರಡಿಸಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ವಿವಿಧೆಡೆ ನಡೆದ ಪ್ರತಿಭಟನೆಗಳು ಕೆಲವೆಡೆ ತೀವ್ರ ಮಟ್ಟದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದವು. ಪೊಲೀಸರು ನಡೆಸಿದ ಗೋಲಿಬಾರ್, ಲಾಠಿಚಾರ್ಜ್ನಲ್ಲಿ 16ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಾನಪುರದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರದ ತೀವ್ರತೆ ಹೆಚ್ಚಿತ್ತು. ಕಾನಪುರವೊಂದರಲ್ಲೇ ಹಿಂಸಾಚಾರ ನಡೆಸಿದರೆನ್ನಲಾದ 150ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಗುರುತಿಸಿ ಪಟ್ಟಿ ಮಾಡಿದ್ಧಾರೆ. ಅವರಲ್ಲಿ 33ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
Comments are closed.