ಮನೋರಂಜನೆ

ಇದು ಕೇವಲ 3 ವರ್ಷಗಳ ಮದುವೆಯಲ್ಲ: ರಾಧಿಕಾ ಪಂಡಿತ್

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾಗಿ ಇಂದಿಗೆ ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಅದಕ್ಕೆ, “ನಮಗೆ ನೆನಪಿಸಲು ನಾನು ಹಳೆ ಫೋಟೋವನ್ನು ಹಂಚಿಕೊಂಡಿದ್ದೇನೆ. ಫೋಟೋನ ಕ್ಲಾರಿಟಿಗಾಗಿ ಕ್ಷಮಿಸಿ. ಇದು ಕೇವಲ ಮೂರು ವರ್ಷಗಳ ಮದುವೆಯಲ್ಲ. ಆದರೆ ಇದು ಸಂಬಂಧವನ್ನು ನಿರ್ಮಿಸಿದ ಹಲವು ವರ್ಷಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.

ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಈಗ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Comments are closed.