ಮನೋರಂಜನೆ

ಸುಮನ್ ನಗರ್‍ಕರ್ ಅವರ ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

Pinterest LinkedIn Tumblr


ಕನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮರಳಿ ಬರುತ್ತಿದ್ದಾರೆಂಬ ಕಾರಣಕ್ಕೆ ಆರಂಭಿಕವಾಗಿ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗೋದೂ ಪಕ್ಕಾ ಆಗಿದೆ. ಈ ಘಳಿಗೆಯಲ್ಲಿಯೇ ಬಬ್ರೂ ಟ್ರೇಲರ್ ಮೂಲಕ ಪ್ರೇಕ್ಷಕರಲ್ಲೊಂದು ಕಾತರ ಮೂಡಿಸುವಲ್ಲಿ ಯಶ ಕಂಡಿದೆ. ಅದಕ್ಕೆ ಕಾರಣವಾಗಿರೋದು ವಿಭಿನ್ನ ಕಥೆಯ ಲಕ್ಷಣ ಮತ್ತು ಅದರಲ್ಲಿನ ದೃಶ್ಯಗಳ ತಾಜಾತನ ಬೆರೆತ ಅದ್ಧೂರಿತನ. ಅಷ್ಟಕ್ಕೂ ಈ ಸಿನಿಮಾ ರೂಪುಗೊಂಡಿರುವ ರೀತಿಯೇ ಅಷ್ಟೊಂದು ವಿಶೇಷವಾಗಿದೆ.

ಕನ್ನಡ ಸಿನಿಮಾ ಮಾಡುವ ಅನೇಕರಿಗೆ ಅಮೆರಿಕದಲ್ಲಿ ಚಿತ್ರೀಕರಣ ನಡೆಸಬೇಕು, ಅಲ್ಲಿನ ಸುಂದರ ಪ್ರದೇಶಗಳನ್ನು ಕಾಣಿಸಬೇಕೆಂಬ ಆಸೆ ಇರುತ್ತದೆ. ಆದರೆ ಒಂದೇ ಒಂದು ಹಾಡಿನ ಚಿತ್ರೀಕರಣ ನಡೆಸೋದರಲ್ಲಿ ಸುಸ್ತು ಹೊಡೆಯಬೇಕಾಗುತ್ತದೆ. ಅಂಥದ್ದರಲ್ಲಿ ಸಿನಿಮಾದ ಇತರೇ ಭಾಗಗಳ ಚಿತ್ರೀಕರಣವನ್ನು ಅಲ್ಲೇ ನಡೆಸೋದಕ್ಕೆ ಹರಸಾಹಸವನ್ನೇ ಪಡಬೇಕಾಗುತ್ತದೆ. ಬಬ್ರೂ ಚಿತ್ರದ ವಿಶೇಷತೆಗಳಿರುವುದು ಈ ವಿಚಾರದಲ್ಲಿಯೇ. ಈ ಇಡೀ ಚಿತ್ರವೇ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಇದು ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಏಕೈಕ ಚಿತ್ರವೆಂಬ ಕೀರ್ತಿಗೂ ಭಾಜನವಾಗಿದೆ.

ಈ ಚಿತ್ರವನ್ನು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೇ ಸೇರಿಕೊಂಡು ರೂಪಿಸಿದ್ದಾರೆ. ಸುಜಯ್ ರಾಮಯ್ಯ ನಿರ್ದೇಶನದ ಈ ಚಿತ್ರವನ್ನು ಯುಗ ಕ್ರಿಯೇಷನ್ಸ್ ಹಾಗೂ ಸುಮನ್‍ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮನ್ ನಗರ್‍ಕರ್ ಇದರಲ್ಲಿ ಪ್ರಧಾನ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇದರ ತಾಂತ್ರಿಕ ವರ್ಗದಲ್ಲಿಯೂ ಅಮೆರಿಕದವರೇ ಕಾರ್ಯ ನಿರ್ವಹಿಸಿದ್ದಾರೆ. ಒಂದಷ್ಟು ಮುಖ್ಯ ಪಾತ್ರಗಳನ್ನು ಅಮೆರಿಕದ ಕಲಾವಿದರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಆಧಾರದಲ್ಲಿ ನೋಡುವುದಾದರೆ ಇದನ್ನು ಹಾಲಿವುಡ್ ಕನ್ನಡ ಚಿತ್ರ ಎನ್ನಲಡ್ಡಿಯಿಲ್ಲ.

ಸುಮನ್ ನಗರ್‍ಕರ್ ಅಖಂಡ ಹದಿನೈದು ವರ್ಷಗಳ ಬಳಿಕ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿಯೂ ಅವತಾರವೆತ್ತಿರುವ ಅವರು ಬಹಳಷ್ಟು ವರ್ಷಗಳ ಬಳಿಕ ಕನ್ನಡದ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಮಹಿ ಹಿರೇಮಠ್ ಮತ್ತೊಂದು ಪ್ರಧಾನ ಪಾತ್ರದಲ್ಲಿ ಜರ್ನಿಯ ಕ್ರೇಜ್ ಹೊಂದಿರೋ ಸೋಮಾರಿ ಹುಡುಗನಾಗಿ ನಟಿಸಿದ್ದಾರಂತೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೇಲರ್ ಸೂಪರ್ ಹಿಟ್ ಆಗಿದೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾದತ್ತ ಪ್ರೇಕ್ಷಕ ವಲಯದಲ್ಲೊಂದು ಕಾತರ ಮನೆ ಮಾಡಿಕೊಂಡಿದೆ. ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಮೈಲಿಗಲ್ಲಿನಂತಹ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ.

Comments are closed.