ಗಾಂಧಿನಗರ: ಪೋಷಕರೊಂದಿಗೆ ಮಲಗಿದ್ದ ಅಪ್ರಾಪ್ತೆಯನ್ನು ಕಾಮಕನೊಬ್ಬ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಗುಜರಾತ್‍ನ ರಾಜಕೋಟ್ ಬಳಿಯ ಭಾವನಗರ ರಸ್ತೆ ಬಳಿ ಘಟನೆ ನಡೆದಿದ್ದು, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. 8 ವರ್ಷದ ಬಾಲಕಿಯನ್ನು ಮಧ್ಯಮ ವಯಸ್ಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಮೂಲ್ ಕ್ರಾಸ್ ರಸ್ತೆಯ ರಾಜಕೋಟ್ ನಗರಸಭೆಯ ಗಾರ್ಡನ್‍ನಲ್ಲಿ ಬಾಲಕಿ ಕುಟುಂಬದವರೊಂದಿಗೆ ಮಲಗಿದ್ದಳು. ಅಲ್ಲಿಂದ ಬಾಲಕಿಯನ್ನು ಸೇತುವೆ ಕೆಳಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ.
ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾತ್ರಿ 11.30ಕ್ಕೆ ಬಾಲಕಿಯನ್ನು ಬ್ಲಾಂಕೆಟ್ ಸಮೇತ ಎಳೆದುಕೊಂಡು ಹೋಗಿದ್ದಾನೆ. ಘಟನೆ ನಂತರ ಬಾಲಕಿ ತನ್ನ ಕುಟುಂಬದವರ ಬಳಿ ಓಡೋಡಿ ಬಂದಿದ್ದಾಳೆ. ಆರೋಪಿ ಕೆಲಹೊತ್ತು ಅದೇ ಸ್ಥಳದಲ್ಲಿ ಏಕಾಂಗಿಯಾಗಿ ಓಡಾಡಿದ್ದರ ಕುರಿತು ವಿಡಿಯೋದಲ್ಲಿ ದಾಖಲಾಗಿದೆ.
ಈ ಕುರಿತು ಬಾಲಕಿಯ ಪೋಷಕರು ಮಾಹಿತಿ ನೀಡಿದ್ದು, ಮಲಗಿದ್ದಾಗ ನಡು ರಾತ್ರಿಯಲ್ಲಿ ಬಾಲಕಿ ಕಾಣದಿರುವುದನ್ನು ಅವಳ ಅಜ್ಜಿ ತಿಳಿಸಿದಳು. ತಕ್ಷಣವೇ ನಾವೆಲ್ಲರೂ ಎಚ್ಚರವಾದೆವು. ನಂತರ ಕುಟುಂಬಸ್ಥರೆಲ್ಲ ಸೇರಿ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದೆವು. ಅರ್ಧ ಗಂಟೆ ನಂತರ ಅವಳೇ ಓಡೋಡಿ ಬಂದು ಅಳಲು ಪ್ರಾರಂಭಿಸಿದಳು. ನಂತರ ಘಟನೆ ಕುರಿತು ನಮಗೆ ವಿವರಿಸಿದಳು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಘಟನೆ ಕುರಿತು ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಸರ್ಕಾರಿ ಮಹಿಳಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಘಟನೆ ನಂತರ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ.
Comments are closed.