ಕರ್ನಾಟಕ

ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾದ ಮೈಸೂರಿನ ಅಭಿಷೇಕ್ ಪೋಷಕರಿಗೆ ‘ಡಬಲ್’ ಶಾಕ್!

Pinterest LinkedIn Tumblr


ಮೈಸೂರು: ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾದ ಮೈಸೂರಿನ ವಿದ್ಯಾರ್ಥಿಯ ಕುಟುಂಬಕ್ಕೆ ಇದೀಗ ಡಬಲ್ ಆಘಾತ ಎದುರಾಗಿದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಭಿಷೇಕ್‌, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದರು. ವಿದೇಶಕ್ಕೆ ತೆರಳಲು ಸಾಕಷ್ಟು ಹಣದ ಅವಶ್ಯಕತೆ ಇದ್ದ ಕಾರಣ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದರು. ಆದರೆ, ಶಿಕ್ಷಣ ಪೂರ್ಣಗೊಳ್ಳುವ ಮುನ್ನವೇ ಗುಂಡೇಟಿಗೆ ಬಲಿಯಾಗಿದ್ದಾರೆ. ಇದರಿಂದ ಕುಟುಂಬಕ್ಕೆ ಮಾನಸಿಕ ಆಘಾತದೊಂದಿಗೆ ಆರ್ಥಿಕ ಆಘಾತ ಕೂಡ ಆಗಿದೆ. ಆರ್ಥಿಕ ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ನೆರವು ನೀಡಲು ಮೃತ ಅಭಿಷೇಕ್‌ ಸಂಬಂಧಿಕರು ಮತ್ತು ಸ್ನೇಹಿತರು, ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.

ಅಭಿಷೇಕ್‌ನ ಸಂಬಂಧಿಕರಾದ ಶ್ರೀವತ್ಸ ಭಟ್‌ ಮತ್ತು ವರುಣ್‌ ಕೃಷ್ಣ ಅವರು ಕ್ರೌಢ್‌ ಫಡ್ಡಿಂಗ್‌ ಆರಂಭಿಸಿದ್ದರೆ. 70 ಸಾವಿರ ಡಾಲರ್‌ (50 ಲಕ್ಷ ರೂ.) ಸಂಗ್ರಹಿಸಲು ಯೋಜಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಅಭಿಷೇಕ್‌ನ ಸ್ನೇಹಿತರು ಮತ್ತು ಪರಿಚಿತರು ತಮ್ಮ ಕೈಲಾದ ನೆರವು ನೀಡಿದ್ದಾರೆ. ಕೇವಲ 16 ಗಂಟೆಗಳಲ್ಲಿ 33,413 ಡಾಲರ್‌(23.97 ಲಕ್ಷ ರೂ.) ಸಂಗ್ರಹವಾಗಿದೆ.

ಅಭಿಷೇಕ್‌ನ ಪೋಷಕರು ಅಮೆರಿಕಕ್ಕೆ ತೆರಳಲು ಅಗತ್ಯ ಹಣಕಾಸು ನೆರವು ನೀಡಲಾಗುತ್ತಿದೆ. ಅಂತ್ಯ ಸಂಸ್ಕಾರ ಸೇರಿದಂತೆ ಕ್ರಿಯಾ ಕರ್ಮ ನೆರವೇರಿಸಲು ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಈ ಸಂದರ್ಭದಲ್ಲಿ ಮೃತನ ಕುಟುಂಬದವರೊಂದಿಗೆ ಮಾತುಕತೆ ನಡೆಸಿದಾಗ, ಅಭಿಷೇಕ್‌ನ ಉನ್ನತ ವ್ಯಾಸಂಗಕ್ಕೂ ಸಾಲ ಮಾಡಿದ್ದ ವಿಚಾರ ಬಹಿರಂಗವಾಯ್ತು. ಈ ಹಿನ್ನೆಲೆಯಲ್ಲಿ 70 ಸಾವಿರ ಡಾಲರ್‌ ಸಂಗ್ರಹಿಸಲು ನಿರ್ಧರಿಸಲಾಗಿದೆ. ಈಗಾಗಲೇ 33,413 ಡಾಲರ್‌ ಸಂಗ್ರಹವಾಗಿದೆ. ಒಂದೆರಡು ದಿನಗಳಲ್ಲಿ ದಾನಿಗಳಿಂದ ಇನ್ನೂ ಹೆಚ್ಚು ಹಣ ಬರಲಿದೆ. ಈ ಹಣವನ್ನು ಅಭಿಷೇಕ್‌ ತಂದೆಗೆ ನೀಡಲಾಗುವುದು ಎಂದು ಸಂಬಂಧಿ ವರುಣ್‌ ಕೃಷ್ಣ ತಿಳಿಸಿದ್ದಾರೆ.

ವಾರದ ಬಳಿಕ ಅಭಿಷೇಕ್‌ ಅಂತ್ಯಸಂಸ್ಕಾರ

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ತೆರಳಲು ಅಭಿಷೇಕ್‌, ಮೈಸೂರಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದರು. ಶಿಕ್ಷಣ ಪೂರ್ಣಗೊಂಡ ಬಳಿಕ ತೀರಿಸುವ ವ್ಯವಸ್ಥೆ ಮಾಡಿದ್ದರು ಎನ್ನುತ್ತಾರೆ ಮೃತನ ಸಂಬಂಧಿ ರಾಮನಾಥ್‌.

ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂ. ವೆಚ್ಚವಾಗಲಿದ್ದು, ಬ್ಯಾಂಕುಗಳು ಯಾವುದಾದರೂ ಆಸ್ತಿಯನ್ನು ಆಧಾರವಾಗಿರಿಸಿಕೊಂಡು ಸಾಲ ನೀಡುತ್ತವೆ. ಶಿಕ್ಷಣ ಮುಗಿದು ಉದ್ಯೋಗಕ್ಕೆ ಸೇರಿದ ಬಳಿಕ ಸಾಲವನ್ನು ತೀರಿಸಬೇಕು. ಈ ಮಧ್ಯೆ ಸಾಲ ಪಡೆದ ವಿದ್ಯಾರ್ಥಿ ಮೃತಪಟ್ಟರೆ ಇಡೀ ಸಾಲವನ್ನು ತೀರಿಸುವ ಜವಾಬ್ದಾರಿ ಕುಟುಂಬದವರ ಮೇಲೆ ಬೀಳುತ್ತದೆ. ಒಂದು ವೇಳೆ ಸಾಲಕ್ಕೆ ವಿಮೆ ಮಾಡಿಸಿದ್ದರೆ, ಮರು ಪಾವತಿ ಅವಶ್ಯಕತೆ ಇರುವುದಿಲ್ಲ ಎನ್ನುತ್ತಾರೆ ಬ್ಯಾಂಕ್‌ ಅಕಾರಿಯೊಬ್ಬರು.

ಅಭಿಷೇಕ್ ಹಂತಕನ ಬಂಧನ

ಅಮೆರಿಕದ ಸ್ಯಾನ್‌ ಬರ್ನಾಡಿಯೊದಲ್ಲಿ ಮೈಸೂರಿನ ಯುವಕ ಅಭಿಷೇಕ್‌ನನ್ನು ಗುಂಡಿಟ್ಟು ಕೊಲೆ ಮಾಡಿದ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಸ್ಥಳೀಯ ವೆಬ್‌ಸೈಟ್‌ ವರದಿ ಮಾಡಿದೆ. ಆಫ್ರಿಕಾ ಮೂಲದ ಎರಿಕ್‌ ಡೆವನ್‌ ಟರ್ನರ್‌(42) ಎಂಬಾತನೇ ಪೊಲೀಸ್‌ ಠಾಣೆಗೆ ಹಾಜರಾಗಿ ತಾನೇ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಸ್ಯಾನ್‌ ಬರ್ಡಿನೋ ಕೌಂಟಿ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಗುಂಡಿನ ದಾಳಿ ನಡೆಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯ ಅಕಾರಿ ಅಲ್ಬರ್ಟ್‌ ಟೆಲೊ ಹೇಳಿಕೆ ನೀಡಿದ್ದಾರೆ ಎಂದು ಸ್ಥಳೀಯ ವೆಬ್‌ಸೈಟ್‌ ವರದಿ ಮಾಡಿದೆ.

ಪೊಲೀಸರೇ ಬಂಧಿಸಿದ್ದಾರೆ: ಗುಂಡಿನ ದಾಳಿ ನಡೆಸಿರುವ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವೆಬ್‌ಸೈಟ್‌ನಲ್ಲಿ ಬಂದಿರುವುದು ತಪ್ಪು ಮಾಹಿತಿಯಾಗಿದ್ದು, ಪೊಲೀಸರೇ ಗುಂಡೇಟಿನ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಗುಂಡಿನ ದಾಳಿ ನಡೆಸಿದ್ದಾನೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ ಎಂದು ಮೃತನ ಸಂಬಂಧಿ ರಾಮನಾಥ್‌ ವಿಜಯ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

Comments are closed.