ಮನೋರಂಜನೆ

‘ಬಿಗ್ ಬಾಸ್‌’ ನಿರೂಪಕರಿಗೆ ಎಷ್ಟು ಸಂಭಾವನೆ?

Pinterest LinkedIn Tumblr


‘ಬಿಗ್ ಬಾಸ್’ ಶೋ ಶುರುವಾದರೆ, ಸಾಕು ಪ್ರೇಕ್ಷಕರ ಗಮನ 100 ದಿನಗಳ ಕಾಲ ಅತ್ತ ಕಡೆಯೇ ಇರುತ್ತದೆ. ಯಾರು ಮನೆಗೆ ಹೋಗ್ತಾರೆ? ಯಾರು ಮನೆಯಿಂದ ಹೊರಬರುತ್ತಾರೆ? ಯಾರಿಗೆ ಎಷ್ಟು ಸಂಭಾವನೆ ಸಿಗುತ್ತದೆ? ನಿರೂಪಣೆ ಮಾಡುವ ನಿರೂಪಕರಿಗೆ ಎಷ್ಟು ಸಂಭಾವನೆ ಸಿಗುತ್ತದೆ? ಇಂಥದ್ದೇ ಪ್ರಶ್ನೆಗಳು ನೋಡುಗರಲ್ಲಿ ಇರುತ್ತವೆ. ಇದೀಗ ನಿರೂಪಕರ ಸಂಭಾವನೆ ಎಷ್ಟು ಎಂಬುದಕ್ಕೆ ಉತ್ತರ ಸಿಕ್ಕಿದೆ.

‘ಬಿಗ್‌ ಬಾಸ್’ ಶೋ ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಮೂಡಿಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್‌ ಖಾನ್‌, ಕನ್ನಡದಲ್ಲಿ ‘ಕಿಚ್ಚ’ ಸುದೀಪ್‌, ತಮಿಳಿನಲ್ಲಿ ಕಮಲ್‌ ಹಾಸನ್‌ ನಡೆಸಿಕೊಟ್ಟರೆ, ತೆಲುಗಿನಲ್ಲಿ ಮಾತ್ರ ಕೊಂಚ ಡಿಫರೆಂಟ್ ಆಗಿದೆ. ಯಾಕೆಂದರೆ, ಇದುವರೆಗೂ ಮೂರು ಸೀಸನ್‌ ನಡೆದಿದ್ದು, ಮೊದಲ ಸೀಸನ್‌ಗೆ ಜೂ. ಎನ್‌ಟಿಆರ್, ಎರಡನೇ ಸೀಸನ್‌ಗೆ ನಾನಿ ಹಾಗೂ ಮೂರನೇ ಸೀಸನ್‌ಗೆ ನಾಗಾರ್ಜುನ ನಿರೂಪಣೆ ಮಾಡಿದ್ದರು. ಇದೀಗ ತೆಲುಗು ‘ಬಿಗ್‌ ಬಾಸ್‌’ನ ಮೂರನೇ ಸೀಸನ್‌ ಮುಕ್ತಾಯಗೊಂಡಿದ್ದು, ರಾಹುಲ್ ಸಿಪ್ಲಿಗುಂಜ್ ವಿಜೇತರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ 50 ಲಕ್ಷ ರೂ, ಬಹುಮಾನ ನೀಡಲಾಗಿದೆ. ಹಾಗಾದರೆ, ಈ ಶೋವನ್ನು ನಿರೂಪಣೆ ಮಾಡಿದ್ದಕ್ಕೆ ನಟ ನಾಗಾರ್ಜುನ ಅವರಿಗೆ ನೀಡಲಾದ ಸಂಭಾವನೆ ಎಷ್ಟು ಗೊತ್ತಾ?

ಇದೇ ಮೊದಲ ಬಾರಿಗೆ ಶೋ ನಿರೂಪಣೆ ಹೊಣೆ ಹೊತ್ತಿರುವ ನಾಗಾರ್ಜನ ಅವರಿಗೆ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ನೀಡಲಾಗಿದೆಯಂತೆ! ಹೌದು. ಬಿಗ್‌ ಬಾಸ್‌ನಲ್ಲಿ ಒಟ್ಟು 30 ಸಂಚಿಕೆಗಳಿಗೆ ಅವರು ನಿರೂಪಣೆ ಮಾಡಿದ್ದರು. ಅದಕ್ಕಾಗಿ ಅವರಿಗೆ ಇಷ್ಟೊಂದು ಪ್ರಮಾಣದ ಸಂಭಾವನೆ ನೀಡಲಾಗಿದೆಯಂತೆ. ಆದರೆ, ಈ ಶೋನಲ್ಲಿ ಸ್ಪರ್ಧಿಯಾಗಿ, ಕೊನೆಗೆ ರನ್ನರ್‌ ಅಪ್‌ ಆಗಿದ್ದರು ಶ್ರೀಮುಖಿ. ಅವರಿಗೆ ನೀಡಿರುವ ಸಂಭಾವನೆ ಮತ್ತಷ್ಟು ಅಚ್ಚರಿ ಮೂಡಿಸಿದೆ.

ಹೌದು, ಶ್ರೀಮುಖಿ 105 ದಿನಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ಇದ್ದರು. ಅಂತಿಮವಾಗಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಆದರೆ, 105 ದಿನಗಳ ಕಾಲ ಮನೆಯಲ್ಲಿ ಅವರು ಇದ್ದಿದ್ದಕ್ಕಾಗಿ ಅವರಿಗೆ ಸಿಕ್ಕಿರುವುದು ಬರೋಬ್ಬರಿ 1 ಕೋಟಿ ರೂ.ಗಳಂತೆ! ಗೆದ್ದ ಸ್ಪರ್ಧಿಗೆ ನೀಡಿರುವುದು 50 ಲಕ್ಷ ರೂ. ಅಚ್ಚರಿ ಎಂದರೆ, ರನ್ನರ್ ಅಪ್‌ ಅದಕ್ಕಿಂತ ಹೆಚ್ಚಿನ ಹಣವನ್ನು ಸಂಭಾವನೆ ರೂಪದಲ್ಲೇ ಪಡೆದುಕೊಂಡಿದ್ದಾರೆ ಎಂಬುದು ಮೂಲಗಳ ಮಾಹಿತಿ.

Comments are closed.