ರಾಷ್ಟ್ರೀಯ

ನಿಶ್ಚಿತಾರ್ಥ ಜೋಡಿಯಿಂದ ಸೆಲ್ಫಿ: ಆಯತಪ್ಪಿ ಬಾವಿಗೆ ಬಿದ್ದು ಯುವತಿ ಸಾವು

Pinterest LinkedIn Tumblr


ಚೆನ್ನೈ: ಇತ್ತೀಚೆಗಷ್ಟೇ ನಿಶ್ಚಿತಾರ್ಥವಾದ ಜೋಡಿಯೊಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಾವಿಗೆ ಬಿದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.

ಈ ಘಟನೆ ಪಟ್ಟಾಭಿರಾಮ್ ಎಂಬಲ್ಲಿ ಸೋಮವಾರ ನಡೆದಿದ್ದು, ಅವಘಡದಲ್ಲಿ ಯುವತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಆದರೆ ಯುವಕ ಮಾತ್ರ ರೈತನ ಸಹಾಯದಿಂದಾಗಿ ಪ್ರಾಣಾಪಾಯದಿಂದಾಗಿ ಪಾರಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ ದುರ್ದೈವಿ ಯುವತಿಯನ್ನು ಟಿ ಮರ್ಸಿ ಸ್ಟೆಪ್ಪಿ(24) ಎಂದು ಗುರುತಿಸಲಾಗಿದೆ. ಪಟ್ಟಾಭಿರಾಮ್ ಬಳಿಯ ಗಾಂಧಿನಗರ ನಿವಾಸಿಯಾಗಿರುವ ಈಕೆಗೆ ಕೆಲ ದಿನಗಳ ಹಿಂದೆಯಷ್ಟೇ ಡಿ ಅಪ್ಪು(24) ಎಂಬಾತನ ಜೊತೆ ಮದುವೆ ನಿಶ್ಚಿತಾರ್ಥವಾಗಿತ್ತು. ಈತ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದನು. ಇವರಿಬ್ಬರ ಮದುವೆ ಜನವರಿಯಲ್ಲಿ ನಿಗದಿಯಾಗಿತ್ತು. ಆದರೆ ಅದಕ್ಕೂ ಮೊದಲೇ ಯುವತಿ ಮೃತಪಟ್ಟಿದ್ದು, ಇದೀಗ ಇಬ್ಬರ ಕುಟುಂಬ ಶೋಕದಲ್ಲಿ ಮುಳುಗಿದೆ.

ನಡೆದಿದ್ದೇನು..?
ಸೋಮವಾರ ಮರ್ಸಿಯನ್ನು ಆಕೆಯ ಮನೆಯಿಂದಲೇ ಅಪ್ಪು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದು, ಇಬ್ಬರೂ ಕೆಲ ಹೊತ್ತು ಸುತ್ತಾಡಿದ್ದಾರೆ. ಬಳಿಕ 3 ಗಂಟೆ ಸುಮಾರಿಗೆ ವಂದಲುರ್-ಮಿಂಜುರ್ ಸಮೀಪ ಇರುವ ಕೃಷಿ ಭೂಮಿಯತ್ತ ತೆರಳಿದ್ದಾರೆ. ಹಾಗೆಯೇ ಅಲ್ಲಿರುವ ಬಾವಿಯೊಂದನ್ನು ಗಮನಿಸಿದ್ದು, ಇಬ್ಬರೂ ಬಾವಿ ಬಳಿ ತೆರಳಿ ಅದರ ಸುತ್ತಮುತ್ತ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಪುರಾತನ ಕಾಲದ ಬಾವಿಯಾಗಿದ್ದು, ಇಳಿಯಲು ಮೆಟ್ಟಿಲುಗಳಿದ್ದವು. ಹೀಗಾಗಿ ಇಬ್ಬರೂ ಸೆಲ್ಫಿ ತೆಗೆದುಕೊಂಡ ಬಳಿಕ ಮೆಟ್ಟಿಲುಗಳ ಮೂಲಕ ಇಳಿದು ಅದರಲ್ಲಿ ಕುಳಿತುಕೊಂಡು ಮತ್ತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಹೀಗೆ ಫೋಟೋ ತೆಗೆಯುತ್ತಿದ್ದಾಗ ಮರ್ಸಿ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ತಲೆ ಬಾವಿ ಗೋಡೆಗೆ ಹೊಡೆದು ನಂತರ ನೀರಿಗೆ ಬಿದ್ದಿದ್ದಾಳೆ. ಮರ್ಸಿ ಬೀಳುತ್ತಿದ್ದಂತೆಯೇ ಆಕೆಯನ್ನು ಹಿಡಿಯಲು ಅಪ್ಪು ಪ್ರಯತ್ನಿಸಿದ್ದು, ಆತನೂ ಬಾವಿಗೆ ಬಿದ್ದಿದ್ದಾನೆ.

ಈ ವೇಳೆ ಅಪ್ಪು ಜೋರಾಗಿ ಕಿರುಚಾಡಿದ್ದಾನೆ. ಚೀರಾಟ ಆಲಿಸಿದ ಅಲ್ಲೇ ಇದ್ದ ರೈತ ಸದಗೋಪನ್ ಬಾವಿ ಬಳಿ ಓಡಿ ಬಂದಿದ್ದು, ಅದರೊಳಗೆ ವ್ಯಕ್ತಿ ಇರುವುದನ್ನು ಕಂಡು ಹಾರಿದ್ದಾರೆ. ಅಲ್ಲದೆ ಅಪ್ಪುವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಆದರೆ ಈ ಸಮಯದಲ್ಲಿ ರೈತನಿಗೆ ಮರ್ಸಿ ನೀರಿನಲ್ಲಿ ಅದಾಗಲೇ ಮುಳುಗಿದ್ದರಿಂದ ಕಾಣಿಸಿರಲಿಲ್ಲ. ಕೂಡಲೇ ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದ್ದು ಅವರು ಕೂಡ ಸ್ಥಳಕ್ಕೆ ದೌಡಾಯಿಸಿದ್ದು, ನಂತರ ಮರ್ಸಿ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.

ಘಟನೆ ಸಂಬಂಧ ಮುಪುಡುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಅಪ್ಪು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನಿಖೆ ಮುಂದುವರಿದಿದೆ.

Comments are closed.