ಮನೋರಂಜನೆ

‘ನಮಗೆ ಎಂಥ ಮಗು ಹುಟ್ತಪ್ಪ ಎಂದು ಬೇಸರ ಮಾಡಿಕೊಂಡಿದ್ವಿ’

Pinterest LinkedIn Tumblr


ನಟ ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಇದೇ ಅಕ್ಟೋಬರ್ 11ಕ್ಕೆ ತೆರೆಗೆ ಬರುತ್ತಿದೆ. ಚೊಚ್ಚಲ ಬಾರಿಗೆ ಸೃಜನ್ ತಮ್ಮ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಹಿರಿಯ ನಟಿ ಗಿರಿಜಾ ಲೋಕೇಶ್‌, ಸೃಜನ್ ಬಗ್ಗೆ ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಸೃಜನ್ ಚಿಕ್ಕವರಿದ್ದಾಗ, ನಮ್ಮ ಹೊಟ್ಟೆಯಲ್ಲಿ ಎಂಥ ಮಗು ಹುಟ್ತಪ್ಪ ಎಂದು ಗಿರಿಜಾ ಲೋಕೇಶ್ ಬೇಸರಪಟ್ಟುಕೊಂಡಿದ್ರಂತೆ!!

ಅಚ್ಚರಿ ಎನಿಸಿದರೂ, ಈ ವಿಚಾರವನ್ನು ಹೇಳಿಕೊಂಡಿದರುವುದು ಸ್ವತಃ ಗಿರಿಜಾ ಲೋಕೇಶ್‌. ಹಾಗಂತ, ಇದೇನು ಗಂಭೀರವಾದ ವಿಚಾರವಲ್ಲ. ಅಷ್ಟಕ್ಕೂ ಗಿರಿಜಾ ಹೇಳಿದ್ದೇನೆಂದರೆ, ‘ನನ್ನ ಮಗ ಕಲಾವಿದ ಆಗ್ತಾನೆ ಅಂತ ನಮ್ಮ ಕುಟುಂಬದಲ್ಲಿ ಯಾರು ಅಂದುಕೊಂಡಿರಲಿಲ್ಲ. ಆದರೆ, ಇಂದು ಒಬ್ಬ ಒಳ್ಳೆಯ ಕಲಾವಿದ, ಒಳ್ಳೆಯ ನಿರೂಪಕನಾಗಿ ಅವನು ಹೆಸರು ಮಾಡಿದ್ದಾನೆ. ಕರ್ನಾಟಕದಲ್ಲಿ ಜನಪ್ರಿಯನಾಗಿದ್ದಾನೆ ಎಂಬುದಕ್ಕೆ ನಂಗೆ ಹೆಮ್ಮೆ ಆಗುತ್ತದೆ. ಯಾಕೆಂದರೆ, ಅವನು ಚಿಕ್ಕೋನಿರುವಾಗ ನಾಟಕ ಮಾಡಬೇಡ, ಸಿನಿಮಾ ಮಾಡಬೇಡ ಎಂದು ನನಗೆ ಹೇಳುತ್ತ, ಅಳುತ್ತಿದ್ದ. ಶೂಟಿಂಗ್ ಅಂದ್ರೆ ಸಾಕು ಅಮ್ಮ ಹೋಗೋದು ಬೇಡ, ಅಪ್ಪ ಬೇಕಿದ್ರೆ ಹೋಗಲಿ ಅಂತ ಗಲಾಟೆ ಮಾಡ್ತಿದ್ದ. ಸಿನಿಮಾ, ನಾಟಕದ ಬಗ್ಗೆ ಚೂರು ಒಲವು ಇರಲಿಲ್ಲ. ಅವನು ಮಾಡುವುದನ್ನೆಲ್ಲ ನೋಡಿದಾಗ, ‘ನಮ್ಮ ಹೊಟ್ಟೆಯಲ್ಲಿ ಎಂಥ ಮಗು ಹುಟ್ತಪ್ಪ’ ಎಂದು ಬೇಸರ ಮಾಡಿಕೊಂಡಿದ್ವಿ! ಅದು ತಂದೆ, ತಾತ, ತಾಯಿ ಎಲ್ಲರು ಕಲಾವಿದರೆ. ಆದರೆ, ಅವನು ಕಲಾವಿದ ಆಗಲಿಲ್ಲವಲ್ಲಪ್ಪ ಎಂಬ ಬೇಸರ ಇತ್ತು. ಇಂದು ಅವನು ಒಬ್ಬ ಒಳ್ಳೆಯ ಕಲಾವಿದ ಆಗಿದ್ದಾನೆ’ ಎಂದು ಖುಷಿ ಪಡುತ್ತಾರೆ.

‘ಇಂದು ಮಗ ಇಷ್ಟು ದೊಡ್ಡ ಕಲಾವಿದ ಆಗಿದ್ದಾನೆ ಎಂದರೆ ನಂಬೋಕೆ ಆಗ್ತಿಲ್ಲ. ಆದರೆ, ಅವನು ಏನೇ ಸಾಧಿಸಿದ್ದರೂ, ಅದಕ್ಕೆ ಅವನ ಸ್ವಪ್ರತಿಭೆಯೇ ಕಾರಣ. ಯಾರ ಸಹಾಯವಿಲ್ಲದೆ ಅವನು ಬೆಳೆದಿದ್ದಾನೆ. ತಾಯಿ ಆಗಿ ನನಗೆ ತುಂಬ ಸಂತೋಷವಾಗಿದೆ. ನಮ್ಮ ಮಾವ ಸುಬ್ಬಯ್ಯ ನಾಯ್ಡು, ಪತಿ ಲೋಕೇಶ್ ಅವರು ಎಂಥ ಕಲಾವಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ನನ್ನ ಮಗ ಕೂಡ ಭಿನ್ನವಾಗಿ ಬೆಳೆದಿದ್ದಾನೆ ಎಂಬುದೇ ನನಗೆ ಹೆಮ್ಮೆ’ ಎಂದು ಹೇಳಿಕೊಳ್ಳುತ್ತಾರೆ ಗಿರಿಜಾ.

ಸದ್ಯ ತೆರೆಕಾಣುತ್ತಿರುವ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರದಲ್ಲಿ ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಗಿರಿ ಶಿವಣ್ಣ, ಮಂಡ್ಯ ರಮೇಶ್‌, ತಬಲಾ ನಾಣಿ, ತಾರಾ ಮುಂತಾದವರು ಪೋಷಕರು ನಟಿಸಿದ್ದಾರೆ. ತೇಜಸ್ವಿ ಮೊದಲ ಬಾರಿಗೆ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

Comments are closed.