ಮನೋರಂಜನೆ

ಅದ್ಭುತ ಯಶಸ್ಸು ಕಂಡ ಎಂ.ಜಿ.ಎಂ.ಕಾಲೇಜಿನಲ್ಲಿ ನಡೆದ ಅಂಬಾತನಯರು ಕಂಡ “ಅಹಲ್ಯಾ” ಏಕ ವ್ಯಕ್ತಿ ರಂಗಪ್ರಯೋಗ

Pinterest LinkedIn Tumblr

ವಿಶೇಷ ವರದಿ: ಅಮಿತಾಂಜಲಿ ಕಿರಣ
ಫೋಟೋ: ಜನಾರ್ದನ ಕೊಡವೂರು/ಪ್ರಸನ್ನ ಭಟ್

ಇತ್ತೀಚೆಗೆ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಅಂಬಾತನಯರು ಕಂಡ “ಅಹಲ್ಯಾ” ಭಾವಯಾನ, ಏಕವ್ಯಕ್ತಿ ಪ್ರದರ್ಶನ  ಒಂದು ರೀತಿಯಲ್ಲಿ ಅದ್ಭುತ ಯಶಸ್ಸು ಕಂಡ ರಂಗಪ್ರಯೋಗ ಎಂದರೆ ಉತ್ಪ್ರೇಕ್ಷೆಯಲ್ಲ.

ಇಂದ್ರನ  ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ಪತಿ ಗೌತಮರ ಶಾಪಕ್ಕೆ ಒಳಗಾಗಿ ರಾಮನ ಪಾದ ಸ್ಪರ್ಶದಿಂದ ಶಾಪ ಮುಕ್ತಳಾಗುವ,ಪ್ರಾತಸ್ಮರಣೀಯ ಪಂಚ ಪತಿವ್ರತೆಯರಲ್ಲಿ ಒಬ್ಬಳಾದ ಅಹಲ್ಯೆಯ ಕತೆ ಎಲ್ಲರಿಗೂ ತಿಳಿದದ್ದೆ. ಅಂಬಾ ತನಯರ ಈ ಕೃತಿಯಲ್ಲಿ ಕೋಮಲೆ ಪರಮ ಸುಂದರಿ ಬ್ರಹ್ಮ ಪುತ್ರಿ ಅಹಲ್ಯೆ, ಮನದಲ್ಲಿ ಇಂದ್ರನನ್ನು ಬಯಸಿದ್ದರೂ ಅನಿವಾರ್ಯ ಕಾರಣಗಳಿಂದ  ಮುನಿ ಗೌತಮರ ಕೈ ಹಿಡಿದು ಋಷಿ ಪತ್ನಿಯಾಗಿ ಬದಲಾಗುತ್ತಾಳೆ. ಮುಂದೊಂದು ದಿನ ಇಂದ್ರ ಅಹಲ್ಯೆಯನ್ನು ಸೇರಬೇಕೆಂದು ಬಯಸಿ ಗೌತಮರ ವೇಷದಲ್ಲಿ ಬಂದಾಗ,  ನಿಜ ಏನೆಂದು ಅರಿತಿದ್ದೂ ಇಂದ್ರನನ್ನು ಸೇರುವ ಅಹಲ್ಯೆ ಗೌತಮರ ಶಾಪಕ್ಕೆ ಒಳಗಾಗಿ ಮತ್ತೆ ಶಾಪ ಮುಕ್ತಳಾಗುವವರೆಗಿನ ಆಕೆಯ ಭಾವ ತಲ್ಲಣಗಳನ್ನು ಅಷ್ಟೇ ಭಾವಪೂರ್ಣವಾಗಿ ಪ್ರಸ್ತುತ ಪಡಿಸಿತ್ತು “ಅಹಲ್ಯಾ” ಏಕ ವ್ಯಕ್ತಿ ರಂಗಪ್ರಯೋಗ.

ಋಷಿಕುಮಾರಿ ಅಹಲ್ಯೆ, ಋಷಿ ಪತ್ನಿಯಾಗಿ ಆ ಜೀವನಕ್ಕೆ ನಿಧಾನವಾಗಿ ಒಗ್ಗಿಕೊಳ್ಳುವುದನ್ನು ನಟನೆಯುದ್ದಕ್ಕೂ ಆಕೆ ತನ್ನ ಆಭರಣಗಳನ್ನು ಒಂದೊಂದಾಗಿ ಕಳಚುತ್ತಾ ಕೊನೆಗೆ ನಿರಾಭರಣೆಯಾಗಿ ಕಾವಿ ಧರಿಸುವ   ಮೂಲಕ ಪ್ರೇಕ್ಷಕನೂ ತನಗರಿವಿಲ್ಲದಂತೆ ಬದಲಾದ ಜೀವನಕ್ಕೆ ಒಗ್ಗಿಕೊಳ್ಳುವಂತೆ ಮಾಡುತ್ತದೆ. ರಂಗ ಪ್ರವೇಶಿಸಿದ ನಂತರ ನಡುವೆ ಒಮ್ಮೆಯೂ ನೇಪಥ್ಯಕ್ಕೆ ಹೋಗದೆ ಪ್ರಯೋಗದುದ್ದಕ್ಕೂ ಎಲ್ಲಿಯೂ ಒಂದರೆ ಕ್ಷಣವೂ ಕಾಲ ವ್ಯಯವಾಗದಂತೆ ಪರಿಕರಗಳನ್ನೆಲ್ಲಾ ರಂಗದಲ್ಲೇ ಜೋಡಿಸಿಟ್ಟು ಬದಲಾಯಿಸಿಕೊಂಡದ್ದು ನಿರ್ದೇಶಕನ ಜಾಣತನವನ್ನು ತೋರಿಸುತ್ತಿತ್ತು.

ನಟಿ ಭಾವನಾಳಿಂದಾಗಿಯೇ ಅಹಲ್ಯೆಯ ಭಾವಾಭಿನಯ, ಒನಪು ವಯ್ಯಾರಗಳಿಗೆ ಮೆರುಗು ಬಂತೆಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಿಯೂ ತಪ್ಪಿಲ್ಲದಂತೆ ಸಂಭಾಷಣೆಯೂ  ಅದ್ಭುತವಾಗಿ ಹೊರ ಹೊಮ್ಮಿತ್ತು. ಮುಖವರ್ಣಿಕೆ, ಬೆಳಕಿನ ಚಮತ್ಕಾರಗಳು ನಟಿಯನ್ನೂ ನಟಿಯ ಮುಖಭಾವಗಳನ್ನೂ ಅಷ್ಟೇ ಸುಂದರವಾಗಿ ಕಾಣಿಸಿದವು. ಇವೆಲ್ಲದಕ್ಕೂ ಪೂರಕವಾಗಿ  ಇಂಪಾದ ಸಂಗೀತ ಈ ರಂಗ ಪ್ರಯೋಗಕ್ಕೆ ಮತ್ತೊಂದು ಧನಾತ್ಮಕ ಅಂಶ.ಎಲ್ಲೋ ಒಂದೆರಡು ಕಡೆ ಇಡಿಯ ವೇದಿಕೆಯನ್ನು ಬಳಸಬಹುದಿತ್ತೇನೋ ಎಂದು ಅನಿಸಿದ್ದು ಬಿಟ್ಟರೆ ಒಟ್ಟಾರೆಯಾಗಿ ಶುರುವಿನಿಂದ ಕೊನೆಯತನಕ ಪ್ರೇಕ್ಷಕ ಉಸಿರು ಬಿಗಿ ಹಿಡಿದು ಭಾವುಕನಾಗಿ ನೋಡಿದ ಒಂದು ಅದ್ಭುತ ರಂಗ ಪ್ರಯೋಗ.ಡಾ.ಕಾತ್ಯಾಯಿನಿ ಕುಂಜಿಬೆಟ್ಟುರವರು ರಚಿಸಿದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದವರು ಖ್ಯಾತ ಗಾಯಕಿ ಸಂಗೀತಾ ಬಾಲಚಂದ್ರ ಮತ್ತು ಸಂಗೀತ ಮಾಂತ್ರಿಕನೆಂದೇ ಹೆಸರಾದ ಗೀತಂ ಗಿರೀಶ್ ರವರು.ರಂಗ ಕರ್ಮಿ ಶ್ರೀ ರವಿರಾಜ್ ಹೆಚ್ ಪಿ ಯವರ ನಿರ್ದೇಶನದಲ್ಲಿ ಮೂಡಿ ಬಂದ ಈ ಏಕವ್ಯಕ್ತಿ ರಂಗಪ್ರಯೋಗ ಬಹಳಷ್ಟು ಪ್ರದರ್ಶನಗಳನ್ನು ಕಾಣಲಿ, ಸಾವಿರಾರು ಪ್ರೇಕ್ಷಕರು ನೋಡಿ ಆನಂದಿಸುವಂತಾಗಲಿ.

Comments are closed.