
ಬೆಂಗಳೂರು: ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ ಎಂದು ಕೆಲ ಕನ್ನಡ ಪರ ಹೋರಾಟಗಾರರು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದರು. ಆದರೆ ಇದರ ಬಗ್ಗೆ ಕ್ರಮ ಕೈಗೊಳ್ಳದ ಫಿಲ್ಮ್ ಚೇಂಬರ್ ಅನ್ನು ಮತ್ತೆ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಈ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್, ರಶ್ಮಿಕಾ ಜೊತೆ ನಾವು ಮಾತನಾಡಿದ್ದೇವೆ. ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. “ನನಗೆ ಕನ್ನಡ ಮಾತಾಡಲು ಬರಲ್ಲ ಎಂದು ಹೇಳಿಲ್ಲ. ಬದಲಾಗಿ ಎಲ್ಲಾ ಭಾಷೆಯನ್ನು ಮಾತನಾಡುವಾಗ ಬಾಯಿ ತೊದಲುತ್ತೆ ಎನ್ನುವ ಅರ್ಥದಲ್ಲಿ ಹೇಳಿದ್ದೇನೆ” ಎಂದು ಅವರು ಹೇಳಿದರು ಎಂದು ಜೈರಾಜ್ ತಿಳಿಸಿದ್ದಾರೆ.
ನಡೆದಿದ್ದೇನು?
ಕೆಲ ದಿನಗಳ ಹಿಂದೆ ತಮಿಳ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದು ತೆಲುಗು ತಮಿಳಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಎಂದು ಹೇಳಿದ್ದರು. ಕನ್ನಡ ನಾಡಿನಲ್ಲಿ ಬೆಳೆದು ಕನ್ನಡ ಬರುವುದಿಲ್ಲ ಎಂದು ಹೇಳಿ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದೆಂದು ಫಿಲ್ಮ್ ಚೇಂಬರ್ಗೆ ಕೆಲ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದರು.
Comments are closed.