ಅಂತರಾಷ್ಟ್ರೀಯ

ಕಾಶ್ಮೀರ: ಪಾಕ್ ಗೆ ಬೆಂಬಲ ಘೋಷಿಸಿದ ಚೀನಾ ಮಿಲಿಟರಿ ಆಯೋಗ

Pinterest LinkedIn Tumblr


ಇಸ್ಲಾಮಾಬಾದ್​: ಚೀನಾದ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ ಜನರಲ್​ ಕ್ಸು ಕಿಲಿಯಾಂಗ್ ನೇತೃತ್ವದ ಉನ್ನತ ಅಧಿಕಾರಿಗಳ ನಿಯೋಗವೊಂದು ಬುಧವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಇಸ್ಲಾಮಾಬಾದ್​ನಲ್ಲಿ ಭೇಟಿಯಾಗಿ ಹಲವು ವಿಚಾರಗಳನ್ನು ಚರ್ಚಿಸಿದೆ.

ಈ ನಿಯೋಗದ ಬಳಿ ಮಾತುಕತೆ ನಡೆಸಿದ ಇಮ್ರಾನ್​ ಖಾನ್​, ಕಾಶ್ಮೀರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಭಾರತ ಆಕ್ರಮಿತ ಕಾಶ್ಮೀರದ ಜನರ ಹಕ್ಕುಗಳನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಇದರಿಂದಾಗಿ ಉಗ್ರವಾದದ ಅಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಾಶ್ಮೀರದ ವಿಚಾರ ಈಗ ನಿರ್ಣಾಯಕ ಹಂತದಲ್ಲಿದ್ದು ಚೀನಾ, ಪಾಕಿಸ್ತಾನಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಇಮ್ರಾನ್​ಖಾನ್​ಗೆ ಕ್ಸು ಕಿಲಿಯಾಂಗ್ ಭರವಸೆ ನೀಡಿದ್ದಾರೆ. ಹಾಗೇ ವಿವಿಧ ವಿಭಾಗಗಳಲ್ಲಿ ಚೀನಾ-ಪಾಕಿಸ್ತಾನ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬೀಜಿಂಗ್​ ದೃಢ ಸಂಕಲ್ಪ ಮಾಡಿದೆ ಎಂದು ಹೇಳಿದ್ದಾಗಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಭೇಟಿಯ ವೇಳೆ ಇಮ್ರಾನ್​ ಖಾನ್​ ಹೆಚ್ಚಾಗಿ ಭಾರತದ ಬಗ್ಗೆಯೇ ಮಾತಾಡಿದ್ದಾರೆ ಎಂದು ಹೇಳಲಾಗಿದೆ. ಭಾರತ ಆಗಸ್ಟ್​ 5ರಂದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಿತು. ಇದು ಕಾನೂನು ಬಾಹಿರ ಕ್ರಮವಾಗಿದ್ದು ಏಕಪಕ್ಷೀಯ ನಿರ್ಧಾರ. ಆ ಪ್ರದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿದ್ದು ಲಕ್ಷಾಂತರ ಜನರು ಅನಿರ್ಧಿಷ್ಟಾವಧಿಯವರೆಗೆ ಅಲ್ಲಿಯೇ ಬಂಧಿತರಾಗಿರುವ ಪರಿಸ್ಥಿತಿ ಬಂದಿದೆ ಎಂದು ಚೀನಾ ಮಿಲಿಟರಿ ಆಯೋಗದ ಉಪಾಧ್ಯಕ್ಷನೆದುರು ಅಲವತ್ತುಕೊಂಡಿದ್ದಾರೆ. ಹಾಗೇ ಭಾರತ ತನ್ನ ತಪ್ಪು ಮುಚ್ಚಿಕೊಳ್ಳಲು ವಿಶ್ವದ ಎದುರು ಸುಳ್ಳು ಬಿಂಬಿಸುತ್ತಿದೆ ಎಂದಿದ್ದಾರೆ.

ಕಾಶ್ಮೀರದಲ್ಲಿ ಹೇರಿರುವ ಕರ್ಪ್ಯೂ ಮಾದರಿಯ ನಿಯಂತ್ರಣವನ್ನು ತಕ್ಷಣವೇ ತೆಗೆದುಹಾಕಬೇಕು. ಅಂತಾರಾಷ್ಟ್ರೀಯ ಮಾನವ ಹಕ್ಕು ಎನ್​ಜಿಒಗಳು ಸ್ಥಳಕ್ಕೆ ಆಗಮಿಸಿ ಅಲ್ಲಿನವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.