
ಮುಂಬೈ: ಲತಾ ಮಂಗೇಶ್ಕರ್ ಹಾಡಿರುವ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ಹಾಡಿ ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮರಿಯಾ ಮಂಡಲ್ ಇದೀಗ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಬಾಲಿವುಡ್ನ ಸ್ಟಾರ್ ಸಿಂಗರ್ ಆಗಿಯೇ ಬದಲಾಗಿರುವ ರಾಣು ಅವರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಗಿಫ್ಟ್ ನೀಡಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡುತ್ತಿದ್ದ ರಾಣು ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಾಮಿಯಾ ಅವರ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದ ‘ತೇರಿ ಮೇರಿ ತೇರಿ ಮೇರಿ ಕಹಾನಿ’ ಗೀತೆಗೆ ತಮ್ಮ ಮಧುರ ಕಂಠ ನೀಡಿದ್ದರು. ಇದೀಗ ಸಲ್ಮಾನ್ ಖಾನ್ ಅವರು 55 ಲಕ್ಷ ರೂ. ಬೆಲೆ ಬಾಳುವ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಹಿಂದಿ ಪತ್ರಿಕೆ ಜಾಗರಣ್ ವರದಿ ಮಾಡಿರುವಂತೆ, ಗಾಯಕಿಯ ಮಾಧುರ್ಯಕ್ಕೆ ಮನಸೋತಿರುವ ಸಲ್ಮಾನ್, ರಾಣುಗಾಗಿ ಬರೋಬ್ಬರಿ 55 ಲಕ್ಷದ ಮನೆ ಕೊಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈ ನಗರದ ಹೊರಭಾಗದಲ್ಲಿ ಮನೆಯನ್ನು ಖರೀದಿಸಿ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದಲ್ಲದೆ, ಬಹುನಿರೀಕ್ಷಿತ ತಮ್ಮ ಮುಂಬರುವ ದಬಾಂಗ್ 3 ಚಿತ್ರಕ್ಕೆ ರಾಣು ಅವರಿಂದಲೇ ಒಂದು ಹಾಡನ್ನು ಹಾಡಿಸಲು ಕೂಡ ಸಲ್ಮಾನ್ ಯೋಚಿಸಿದ್ದಾರೆ ಎನ್ನಲಾಗಿದೆ.
‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ… ಹಾಡನ್ನು ಹಿಮೇಶ್ ಅವರು ರಾಣು ಕೈಯಲ್ಲಿ ಹಾಡಿಸಿದ್ದು, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments are closed.