ಮನೋರಂಜನೆ

ಕೇರಳ-ಕರ್ನಾಟಕ ನೆರೆ ಸಂತ್ರಸ್ತರ ಬೆಂಬಲಕ್ಕೆ ನಿಂತ ತಮಿಳು ನಟರು

Pinterest LinkedIn Tumblr


ಕರ್ನಾಟಕ ಹಾಗೂ ಕೇರಳದ ನೆರೆ ಸಂತ್ರಸ್ತರ ನೆರವಿಗೆ ಕಾಲಿವುಡ್ ಖ್ಯಾತ ನಟರುಗಳಾದ ಸೂರ್ಯ ಮತ್ತು ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಮಿಳು ಚಿತ್ರರಂಗದ ಸಹೋದರರಿಬ್ಬರು ಮಹಾಮಳೆಗೆ ನಲುಗಿದ ಕುಟುಂಬಗಳಿ ಧನ ಸಹಾಯ ಮಾಡಿದ್ದಾರೆ.

ರಾಜ್ಯದಲ್ಲಿ ಹಾಗೂ ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಹಲವಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಭೀಕರ ಮಳೆಗೆ ಎರಡು ರಾಜ್ಯದಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಟ ಸೂರ್ಯ ಹಾಗೂ ಕಾರ್ತಿ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರೆ.

ಕಳೆದ ವರ್ಷ ಕೇರಳದಲ್ಲಿ ಉಂಟಾಗಿದ್ದ ಪ್ರವಾಹದ ವೇಳೆ ಸಹ ಕಾಲಿವುಡ್ ಸಹೋದರರು ನೆರವು ನೀಡಿದ್ದರು. ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದಲ್ಲದೆ, ತಮ್ಮ ಅಭಿಮಾನಿಗಳು ನಿರಾಶ್ರಿತರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದರು.

ಹಾಗೆಯೇ ಸೈಕ್ಲೋನ್ ಗಾಜಾ ಚಂಡಮಾರುತದಿಂದ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೂರ್ಯ-ಕಾರ್ತಿ ಫ್ಯಾನ್ಸ್ ವತಿಯಿಂದ ಈ ಹಿಂದೆ 15 ಮನೆಗಳನ್ನು ಕಟ್ಟಿಸಿಕೊಡಲಾಗಿತ್ತು. ಇಷ್ಟೇ ಅಲ್ಲದೆ ‘ಆಗರಂ’ ಫೌಂಡೇಶನ್ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಲವಾರು ವರ್ಷಗಳಿಂದ ಈ ಇಬ್ಬರು ನಟರುಗಳು ನೆರವು ನೀಡುತ್ತಾ ಬರುತ್ತಿದ್ದಾರೆ.

ಇದೀಗ ಮತ್ತೊಮ್ಮೆ ‘ಸಿಂಗಂ’ ಮತ್ತು ‘ಸಿರುತೈ’ ನಟರು ಕರ್ನಾಟಕ-ಕೇರಳ ನಿರಾಶ್ರಿತರ ನೋವಿಗೆ ಮಿಡಿದು ಮಾನವೀಯತೆ ಮರೆದಿದ್ದಾರೆ. ಸದ್ಯ ಸೂರ್ಯ ‘ಕಾಪ್ಪಾನ್’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ನಟ ಕಾರ್ತಿ ‘ಖೈದಿ’ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

Comments are closed.