ಮನೋರಂಜನೆ

ಮಗಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ! ಡೆತ್ ನೋಟಿನಲ್ಲಿ ಬರೆದಿದ್ದು ಏನು…?

Pinterest LinkedIn Tumblr

ಮುಂಬೈ: ಕಿರುತೆರೆ ನಟಿಯೊಬ್ಬರು ತನ್ನ ಮಗಳನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮನೀಶಾನಗರದಲ್ಲಿ ನಡೆದಿದೆ.

ಪ್ರದನ್ಯಾ ಪಾರ್ಕರ್(40) ಆತ್ಮಹತ್ಯೆ ಮಾಡಿಕೊಂಡ ನಟಿ. ಪ್ರದನ್ಯಾ ಮರಾಠಿ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದರು. ಪ್ರದನ್ಯಾ ಮಗಳು ಶ್ರುತಿ(17) 12ನೇ ತರಗತಿಯಲ್ಲಿ ಓದುತ್ತಿದ್ದಳು. ಪ್ರದನ್ಯಾ ಒತ್ತಡದಲ್ಲಿದ್ದ ಕಾರಣ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರದನ್ಯಾ ಹಾಗೂ ಶ್ರುತಿ ಮೃತದೇಹದ ಬಳಿ ಡೆತ್‍ನೋಟ್ ಸಿಕ್ಕಿದೆ. ಡೆತ್‍ನೋಟ್‍ನಲ್ಲಿ ಪ್ರದನ್ಯಾ, “ನಾನು ನನ್ನ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ” ಎಂದು ಬರೆದಿದ್ದಾರೆ.

ನಾವು ಡೆತ್‍ನೋಟ್ ವಶಕ್ಕೆ ಪಡೆದುಕೊಂಡಿದ್ದೇವೆ. ಅಲ್ಲದೆ ಮತ್ತಷ್ಟು ಸುಳಿವಿಗಾಗಿ ಮನೆಯಲ್ಲಿ ಹುಡುಕಾಟ ನಡೆಸುತ್ತಿದ್ದೇವೆ. ಅವರ ಸಾವಿಗೆ ಕಾರಣ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೇಖರ್ ತಿಳಿಸಿದ್ದಾರೆ.

ಇತ್ತೀಚಿಗೆ ಪ್ರದನ್ಯಾ ಅವರಿಗೆ ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಅಲ್ಲದೆ ಅವರ ಪತಿ ಪ್ರಶಾಂತ್ ಪಾರ್ಕರ್ ಅವರು ಕೂಡ ತಮ್ಮ ಬ್ಯುಸಿನೆಸ್‍ನಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶೇಖರ್ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 8- 9 ಗಂಟೆ ನಡುವೆ ಈ ಘಟನೆ ನಡೆದಿದೆ. ಈ ಘಟನೆ ನಡೆಯುವಾಗ ಪ್ರದನ್ಯಾ ಅವರ ಪತಿ ಪ್ರಶಾಂತ್ ಜಿಮ್‍ಗೆ ಹೋಗಿದ್ದರು. ಜಿಮ್‍ನಿಂದ ಮನೆಗೆ ಹಿಂತಿರುಗಿದ್ದಾಗ ಪ್ರಶಾಂತ್ ಮನೆಯಲ್ಲಿ ಪತ್ನಿ ಹಾಗೂ ಮಗಳ ಮೃತದೇಹವನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ಬಗ್ಗೆ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.