ಮನೋರಂಜನೆ

ಕುರುಕ್ಷೇತ್ರ ಚಿತ್ರಕಥೆ ಏನು..?

Pinterest LinkedIn Tumblr


ಕುರುಕ್ಷೇತ್ರ. ಡಿ ಬಾಸ್​ ದರ್ಶನ್​​​ ಅಭಿಮಾನಿಗಳ ಕಳೆದೆರಡು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯ್ತಿದ್ದ ಸಿನಿಮಾ. ಕನ್ನಡ ಚಿತ್ರರಂಗದಲ್ಲೂ ಇಂತಾದೊಂದು ಸಿನಿಮಾ ಮಾಡಬಹುದು ಅನ್ನೋದನ್ನು ನಿರ್ಮಾಪಕ ಮುನಿರತ್ನ ಸಾಧಿಸಿ, ತೋರಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆರ್ಮುಗ ರವಿಶಂಕರ್ ಹೀಗೆ ದಿಗ್ಗಜ ಕಲಾವಿದರು ಕೌರವ- ಪಾಂಡವರಾಗಿ ನೋಡುಗರನ್ನು ಮಹಾಭಾರತದ ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗ್ತಾರೆ.

ಕುರುಕ್ಷೇತ್ರ ಕಥೆಯ ಬಗ್ಗೆ ಬಿಡಿಸಿ ಹೇಳೋದೇ ಬೇಕಾಗಿಲ್ಲ, ಪೌರಾಣಿಕ ಮಹಾಕಾವ್ಯ ಮಹಾಭಾರತದ ಕೊನೆಯಲ್ಲಿ ಬರುವ ಕುರುಕ್ಷೇತ್ರ ಯುದ್ಧ ಮತ್ತು ಅದರ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಕಥೆ ಸಾಗುತ್ತೆ. 3 ಗಂಟೆ ಚಿತ್ರಕ್ಕೆ ಬೇಕಾದ ಪ್ರಸಂಗಗಳನ್ನು ಸೇರಿಸಿ, ಜೆ. ಕೆ ಭಾರವಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಕುರುಕ್ಷೇತ್ರ ಚಿತ್ರದ ನಾಯಕ ದುರ್ಯೋಧನನ ಇಂಟ್ರೋಡಕ್ಷನ್​ ಸಾಂಗ್ ಮೂಲಕ ಸಿನಿಮಾ ತೆರೆದುಕೊಳ್ಳುತ್ತೆ. ಅಲ್ಲಿಂದ ಮುಂದೆ ಕೌರವ – ಪಾಂಡವರು ತಮ್ಮ ವಿದ್ಯೆಗಳನ್ನು ಪ್ರದರ್ಶನ ಮಾಡೋದರ ಮೂಲಕ ಕಥೆ ಶುರುವಾಗುತ್ತೆ.

ಹೀಗೆ ವಿದ್ಯೆಗಳನ್ನು ಪ್ರದರ್ಶಿಸುವ ಸಮಯದಲ್ಲೇ ಅರ್ಜುನನಿಗೆ ಸರಿಸಾಟಿಯಾದ ವೀರ, ಕರ್ಣದ ಆಗಮನವಾಗುತ್ತೆ. ದುರ್ಯೋಧನ ಕರ್ಣನ ಸಾಹಸ ನೋಡಿ, ಆತನ ಕುಲವನ್ನು ನೋಡದೇ, ಅಂಗ ದೇಶದ ರಾಜನನ್ನಾಗಿ ಮಾಡೋದು, ಅಲ್ಲಿಂದ ಅವರ ಸ್ನೇಹ ಶುರುವಾಗುತ್ತೆ. ದುರ್ಯೋಧನ- ಕರ್ಣನಾಗಿ ದರ್ಶನ್​ ಮತ್ತು ಅರ್ಜುನ್ ಸರ್ಜಾ ಮನ ಗೆಲ್ತಾರೆ. ಇದೇ ಸಮಯದಲ್ಲಿ ಕುರುಕ್ಷೇತ್ರ ಕದನಕ್ಕೆ ಕಾರಣನಾದ ಶಕುನಿ ಪರಿಚಯ, ಆತ ಕೌರವರ ವಿರುದ್ಧ ಸೇಡು ತೀರಿಸಿಕೊಳ್ಳೋಕ್ಕೆ ಕಾರಣ ಏನು ಅನ್ನೋದನ್ನು ಹೇಳಲಾಗಿದೆ.

ಮುಂದೆ ಭಾನುಮತಿ ಸ್ವಯಂವರ, ಪಾಂಡವರ ನಡೆಸುವ ರಾಜಸೂಯ ಯಾಗಕ್ಕೆ ದುರ್ಯೋಧನ ಹೋಗೋದು, ಮಯಾ ನಿರ್ಮಿಸಿದ ಮಾಯಾ ಸಭೆಯಲ್ಲಿ ದುರ್ಯೋಧನ ಅಪಮಾನಕ್ಕೀಡಾಗ್ತಾನೆ. ತನ್ನ ನೋಡಿ ನಕ್ಕ ದ್ರೌಪದಿ ಮೇಲೆ ಸೇಡು ತೀರಿಸಿಕೊಳ್ಳೋಕ್ಕೆ ಹವಣಿಸ್ತಾನೆ. ಶಕುನಿಯ ತಂತ್ರದಂತೆ ಪಾಂಡವರು ದ್ಯೂತದಲ್ಲಿ ಪಾಂಡವರು, ಸೋಲೋದು, ದ್ರೌಪದಿಯ ವಸ್ತ್ರಾಭರಣ, ಶ್ರೀಕೃಷ್ಣನ ಲೀಲೆ. ಮತ್ತೊಮ್ಮೆ ದ್ಯೂತಕ್ಕೆ ಬಂದು ಪಾಂಡವರು ಸೋತು, 12 ವರ್ಷ ವನವಾಸ, 1 ವರ್ಷ ಅಜ್ಞಾತವಾಸಕ್ಕೆ ತೆರಳುವುದರ ಜೊತೆಗೆ ಚಿತ್ರಕ್ಕೆ ವಿರಾಮ.

ಕುರುಕ್ಷೇತ್ರ ಚಿತ್ರದ ಮೊದಲಾರ್ಧ ದುರ್ಯೋಧನನ ಸುತ್ತಾ ಸುತ್ತಿದ್ರೆ, ದ್ವಿತಿಯಾರ್ಧ, ಕುರುಕ್ಷೇತ್ರ ಕದನಕ್ಕೆ ವೇದಿಕೆಯಾಗುತ್ತೆ. ಕೌರವ – ಪಾಂಡವರು ಸಂಧಾನಕ್ಕೆ ಒಪ್ಪದೇ 18 ದಿನಗಳ ಮಹಾ ಕುರುಕ್ಷೇತ್ರ ಯುದ್ಧಕ್ಕೆ ಮುಂದಾಗ್ತಾರೆ. ಶ್ರೀಕೃಷ್ಣ ಪಾಂಡವರ ಪರ ನಿಂತರೆ, ಸೈನ್ಯ ದುರ್ಯೋಧನನ ಪಾಲಾಗುತ್ತೆ. ಇದೇ ಸಮಯದಲ್ಲಿ ನಿಖಿಲ್​ ಕುಮಾರಸ್ವಾಮಿ ಅಭಿಮನ್ಯುವಾಗಿ ಎಂಟ್ರಿ ಕೊಡ್ತಾರೆ.

ಕೃಷ್ಣನ ಕುತಂತ್ರದಿಂದ ಕೌರವರ ಪಡೆಯ ಮಹಾನ್​ ವೀರರು, ವೀರ ಮರಣ ಹೊಂದುತ್ತಾರೆ. ಅರ್ಜುನನ ಮಗ ಅಭಿಮನ್ಯು ಸಹ ಕೌರವರ ಮೋಸಕ್ಕೆ ಬಲಿಯಾದರೆ, ಪಡೆದ ಶಾಪಗಳೆಲ್ಲಾ ಒಟ್ಟಾಗಿ ಕರ್ಣ ರಣರಂಗದಲ್ಲಿ ವೀರಮರಣ ಅಪ್ಪುವಂತೆ ಮಾಡುತ್ತೆ. ಸ್ನೇಹಿತನ ಸೋಲಿನಿಂದ ನೊಂದು, ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಅಡಗಿ ಕೂರೋದು, ಭೀಮನ ಚುಚ್ಚು ಮಾತುಗಳಿಂದ ಮೇಲೆ ಬಂದು ಗದಾಯುದ್ಧ ಮಾಡ್ತಾನೆ. ಕೃಷ್ಣನ ಕುತಂತ್ರದಿಂದ ದುರ್ಯೋಧನನ ಊರುಭಂಗವಾಗಿ ಕೊನೆಯುಸಿರೆಳೆಯುತ್ತಾನೆ.

ಕುರುಕ್ಷೇತ್ರ ಆರ್ಟಿಸ್ಟ್​ ಪರ್ಫಾರ್ಮೆನ್ಸ್

​ಕುರುಕ್ಷೇತ್ರ ಕಥೆಯನ್ನ ನಿರ್ದೇಶನ ನಾಗಣ್ಣ ಸೊಗಸಾಗಿ ತೆರೆಮೇಲೆ ತರೋ ಪ್ರಯತ್ನ ಮಾಡಿದ್ದಾರೆ. ಹೇಳಿ ಕೇಳಿ ಇದು ದುರ್ಯೋಧನನ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು, ಹೆಣೆದಿರುವ ಕಥೆ. ಹಾಗಾಗಿ ಸುಯೋಧನನ ಪಾತ್ರದ ಸುತ್ತವೇ ಇಡೀ ಸಿನಿಮಾ ಸುತ್ತುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​​, ದುರ್ಯೋಧನನ ಅವತಾರದಲ್ಲಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಡಿ ಬಾಸ್ ಅಭಿಮಾನಿಗಳಿಗಂತು ಕುರುಕ್ಷೇತ್ರ ಹೇಳಿ ಮಾಡಿಸಿದ ಸಿನಿಮಾ. ದಚ್ಚು ತಮ್ಮ 50ನೇ ಚಿತ್ರವಾಗಿ ಕುರುಕ್ಷೇತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡರು ಅನ್ನೋದು ಈಗ ಗೊತ್ತಾಗ್ತಿದೆ.

ದುರ್ಯೋಧನ ದರ್ಶನ್​ ಬಿಟ್ರೆ, ಹೆಚ್ಚು ಇಷ್ಟವಾಗೋದು ಕರ್ಣ ಪಾತ್ರದಲ್ಲಿ ಮಿಂಚಿರೋ ಅರ್ಜುನ್ ಸರ್ಜಾ. ಸುಯೋಧನನ ಸ್ನೇಹಿತನಾಗಿ, ಮಹಾನ್​ ಪರಾಕ್ರಮಿಯಾಗಿ, ಮಹಾದಾನಿಯಾಗಿ, ಭಾವನಾತ್ಮಕ ದೃಶ್ಯಗಳಲ್ಲೂ ಅರ್ಜುನ್ ಸರ್ಜಾ ಅಂಕ ಗಳಿಸ್ತಾರೆ. ಅಭಿಮನ್ಯು ಪಾತ್ರಕ್ಕೂ ಚಿತ್ರದಲ್ಲಿ ಸ್ಕೋಪ್​ ಇದ್ದು, ನಿಖಿಲ್​ ಕುಮಾರ ಸ್ವಾಮಿ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಭೀಷ್ಮನಾಗಿ ಅಂಬಿ, ಧೃತರಾಷ್ಟ್ರನಾಗಿ ಶ್ರೀನಾಥ್, ದ್ರೋಣಾಚಾರ್ಯರಾಗಿ ಶ್ರೀನಿವಾಸ ಮೂರ್ತಿ, ದ್ರೌಪದಿಯಾಗಿ ಸ್ನೇಹ, ಕೃಷ್ಣನಾಗಿ ರವಿಚಂದ್ರನ್​, ಭಾನುಮತಿಯಾಗಿ ಮೇಘನಾ ರಾಜ್, ಧರ್ಮರಾಯನಾಗಿ ಶಶಿಕುಮಾರ್ ಇಷ್ಟವಾಗ್ತಾರೆ. ಒಂದು ಹಾಡಿನಲ್ಲಿ ಹರಿಪ್ರಿಯಾ ಹೀಗೆ ಬಂದು ಹಾಗೆ ಹೋಗ್ತಾರೆ. ಭೀಮನಾಗಿ ಡ್ಯಾನಿಶ್ ಅಖ್ತರ್​​ ಸೊಗಸಾಗಿ ಕಂಡರು, ನಟನೆಯಲ್ಲಿ ಹಿಂದೆ ಬಿದ್ದಿದ್ದಾರೆ. ಇನ್ನು ಅರ್ಜುನನಾಗಿ ಸೋನುಸೂದ್​​, ನಿರಾಸೆ ಮಾಡ್ತಾರೆ.

ಕುರುಕ್ಷೇತ್ರ ಪ್ಲಸ್​ ಪಾಯಿಂಟ್ಸ್

ದರ್ಶನ್​, ಸರ್ಜಾ, ರವಿಶಂಕರ್ ಅಭಿನಯ
ಹಾಡುಗಳು ಮತ್ತು ಹಿನ್ನೆಲೆ ಸಂಗೀತ
ಸಂಭಾಷಣೆ
ಯುದ್ಧ ಸನ್ನಿವೇಶ, ಗ್ರಾಫಿಕ್ಸ್

ಕುರುಕ್ಷೇತ್ರ ಮೈನಸ್​ ಪಾಯಿಂಟ್ಸ್

ಸೋನುಸೂದ್, ಡ್ಯಾನಿಶ್ ಅಖ್ತರ್​​ ಆಯ್ಕೆ
ದ್ವಿತಿಯಾರ್ಧ ಲ್ಯಾಗ್

TV5 ರೇಟಿಂಗ್​: 4/5

ಫೈನಲ್​ ಸ್ಟೇಟ್​ಮೆಂಟ್

​​ದೊಡ್ಡ ಪಾತ್ರವರ್ಗ. ಸಾವಿರಾರು ಸಹ ಕಲಾವಿದರು.130 ರಿಂದ 140 ದಿನಗಳ ಕಾಲ ಚಿತ್ರೀಕರಣ..ಟುಡಿ ಮಾತ್ರವಲ್ಲದೇ ತ್ರಿಡಿ, ವರ್ಷನ್​ಗಳಲ್ಲಿ ಸಿನಿಮಾ ನಿರ್ಮಾಣ. ವರ್ಷಗಳ ಕಾಲ ಪೋಸ್ಟ್​ ಪ್ರೊಡಕ್ಷನ್. ಒಮ್ಮೆ ಸಿದ್ಧವಾದ ಗ್ರಾಫಿಕ್ಸ್, ಇಷ್ಟವಾಗಲಿಲ್ಲ ಅಂತ, ಮತ್ತೊಮ್ಮೆ ಇಡೀ ಚಿತ್ರವನ್ನು ನಿರ್ಮಾಪಕ ಮುನಿರತ್ನ ತಿದ್ದಿ ತೀಡಿದರು. ಅದೆಲ್ಲದರ ಪ್ರತಿಫಲ ಇದೀಗ ತೆರೆಮೇಲೆ ಕಾಣ್ತಿದೆ. ಕುರುಕ್ಷೇತ್ರ ವೈಭವ ಕಂಡು ಪ್ರೇಕ್ಷಕರ ಮೆಚ್ಚಿಕೊಂಡಿದ್ದಾರೆ. ಥ್ರಿಡಿಯಲ್ಲಿ ಕುರುಕ್ಷೇತ್ರ ಕದನ ನೋಡುಗರಿಗೆ ಒಳ್ಳೆ ಅನುಭವ ಕೊಡುತ್ತೆ.

ಒಟ್ಟಲ್ಲಿ ಇಷ್ಟು ದಿನ ಅಭಿಮಾನಿಗಳು ಕಾದಿದಕ್ಕು ಸಾರ್ಥಕವಾಯ್ತು ಅನ್ನುವಂತೆ ಕುರುಕ್ಷೇತ್ರ ಸಿನಿಮಾ ಮೂಡಿಬಂದಿದೆ. ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್​ ಕಂಡಿದೆ. ಇಂತಹ ಮತ್ತಷ್ಟು ಪೌರಾಣಿಕ, ಐತಿಹಾಸಿಕ ಪ್ರಯತ್ನಗಳು ಕನ್ನಡದಲ್ಲಿ ನಡೆಯಬೇಕು. ಕುಟಂಬ ಸಮೇತರಾಗಿ ಕುರುಕ್ಷೇತ್ರ ಸಿನಿಮಾ ನೋಡಿ ಎಂಜಾಯ್ ಮಾಡಿ.

Comments are closed.