ರಾಷ್ಟ್ರೀಯ

ತನ್ನ ನಾಯಿ ಕೊಂದಿದ್ದಕ್ಕೆ ವಿಷಹಾಕಿ ಮೂರು ಚಿರತೆ ಕೊಂದ!

Pinterest LinkedIn Tumblr


ಉತ್ತರಾಖಂಡ್: ತನ್ನ ಪ್ರೀತಿಯ ಸಾಕು ನಾಯಿಯನ್ನು ಹೊತ್ತೊಯ್ದಿದ್ದರಿಂದ ಆಕ್ರೋಶಗೊಂಡ ಹರಿದ್ವಾರದ ವ್ಯಕ್ತಿಯೊಬ್ಬ ವಿಷಹಾಕಿದ ಪರಿಣಾಮ ಮೂರು ಚಿರತೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್ ನ ರಾಜಾಜಿ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತನ್ನ ಪ್ರೀತಿಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದ್ದು ಹಾಗೂ ಒಂದು ನಾಯಿಗೆ ಗಂಭೀರವಾಗಿ ಗಾಯಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ನಾಯಿಯ ಕಳೇಬರದ ಮೇಲೆ ವಿಷವನ್ನು ಸಿಂಪಡಿಸಿ ಅಭಯಾರಣ್ಯದೊಳಕ್ಕೆ ಎಸೆದಿರುವುದಾಗಿ ಆರೋಪಿ ಸುಖ್ ಪಾಲ್ ತಪ್ಪೊಪ್ಪಿಕೊಂಡಿರುವುದಾಗಿ ತಿಳಿಸಿದೆ.

ಪೋಸ್ಟ್ ಮಾರ್ಟಂ ನಲ್ಲಿ ಮೂರು ಚಿರತೆಗಳು ನಾಯಿ ಮಾಂಸ ತಿಂದು, ಅದರಲ್ಲಿದ್ದ ವಿಷದ ಅಂಶ ದೇಹದೊಳಕ್ಕೆ ಸೇರಿ ಸಾವನ್ನಪ್ಪಿರುವುದಾಗಿ ವಿಧಿವಿಜ್ಞಾನ ತಜ್ಞರು ವರದಿ ನೀಡಿದ್ದರು. ಆಗಸ್ಟ್ 5ರಂದು ರಾಜಾಜಿ ನ್ಯಾಶನಲ್ ಪಾರ್ಕ್ ನ ಬೇರೆ, ಬೇರೆ ವಿಭಾಗಗಳಲ್ಲಿ ಮೂರು ಚಿರತೆಗಳ ಶವ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.

ಮೂರು ಚಿರತೆಗಳು ವಿಷಪೂರಿತವಾಗಿದ್ದ ನಾಯಿ ಮಾಂಸ ತಿಂದು ಸಾವನ್ನಪ್ಪಿರುವುದು ಖಚಿತವಾಗಿದೆ. ಅಲ್ಲದೇ ತಾನೇ ಸೇಡು ತೀರಿಸಿಕೊಳ್ಳಲು ವಿಷಹಾಕಿ ಚಿರತೆ ಸಾಯುವಂತೆ ಮಾಡಿರುವುದಾಗಿ ಸುಖ್ ಪಾಲ್ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಖ್ ಪಾಲ್ ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, 12 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.