ಬೆಂಗಳೂರು: ಹಿರಿಯ ನಟ ಜೈಜಗದೀಶ್ ಹಾಗು ವಿಜಯಲಕ್ಷ್ಮಿ ಸಿಂಗ್ ಅವರ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ‘ಯಾನ’ ಸಿನೆಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ ಯಾನ ಸಿನೆಮಾವನ್ನು ಸ್ವತಃ ವಿಜಯಲಕ್ಷ್ಮಿ ಸಿಂಗ್ ಅವರೇ ಕಥೆ ಬರೆದು ನಿರ್ದೇಶಿಸಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿ ಓಟವನ್ನು ಮುಂದುವರಿಸಿದೆ.
ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಿನೆಮಾದ ಭರ್ಜರಿ ಯಶಸ್ಸಿಗೆ ಕಾರಣೀಕರ್ತವಾಗಿರುವ ಎಲ್ಲ ಮಾಧ್ಯಮದವರಿಗೂ ಕೃತಜ್ಞತೆಯನ್ನು ಚಿತ್ರ ತಂಡ ಸಲ್ಲಿಸಿತು.
ನಿರ್ಮಾಪಕರಾಗಿರುವ ACME ಮೂವೀಸ್ ಇಂಟರ್ನ್ಯಾಷನಲ್’ನ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ಕಾರ್ಯನಿಮಿತ್ತ ದುಬೈಗೆ ತೆರಳಿದ್ದು, ಸುದ್ದಿಗೋಷ್ಠಿಗೆ ಗೈರಾಗಿದ್ದರು.
ಅವರ ಅನುಪಸ್ಥಿತಿಯಲ್ಲಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ಜೈಜಗದೀಶ್, ನಾಯಕಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ, ಚಿತ್ರದ ನಾಯಕರಾದ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್, ಹಿರಿಯ ನಟ ಸುಂದರ್ ರಾಜ್ ಹಾಗು ಚಿತ್ರದ ಇಡೀ ತಂಡದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ರಾಜ್ಯದ 100 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಜುಲೈ 12 ರಂದು ಸಿನೆಮಾ ಬಿಡುಗಡೆಯಾಗಿದ್ದು, ಯಶಸ್ಸಿನ ಪ್ರದರ್ಶನವನ್ನು ಕಾಣುತ್ತಿರುವ ಜೊತೆಗೆ ಸಿನೆಮಾದ ಬಗ್ಗೆ ಅಪಾರ ಮೆಚ್ಚುಗೆ, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸಂತಸ ಹಂಚಿಕೊಂಡರು.
ಕನ್ನಡ, ಇಂಗ್ಲಿಷ್ ಮಾಧ್ಯಮಗಳು ಸೇರಿದಂತೆ ಬಹುತೇಕ ಎಲ್ಲ ಮಾಧ್ಯಮಗಳು ಯಾನ ಬಗ್ಗೆ ಮೆಚ್ಚುಗೆಯ ವಿಮರ್ಶೆ ಮಾಡುವ ಮೂಲಕ ಚಿತ್ರಕ್ಕೆ ಬೆಂಬಲಿಸಿವೆ. ಚಿತ್ರದ ಕಥೆ, ಅಭಿನಯ, ಸಂಗೀತ, ತಂತ್ರಜ್ಞಾನ ಎಲ್ಲವನ್ನು ಮಾಧ್ಯಮಗಳು ಕೊಂಡಾಡಿವೆ ಎಂದು ವಿಜಯಲಕ್ಷ್ಮಿ ಸಿಂಗ್ ಹೇಳಿದರು.
ಸಿನೆಮಾ ನೋಡಿ ಜನ ಮೆಚ್ಚಿದ್ದಾರೆ. ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಇಂಥ ಕಥೆಯುಳ್ಳ ಸಿನೆಮಾ ಪ್ರದರ್ಶನ ಕಂಡಿಲ್ಲ. ಸಿನೆಮಾದಲ್ಲಿ ಒಂದೊಳ್ಳೆಯ ಸಂದೇಶವನ್ನು ನಾವು ನೀಡಿದ್ದು, ಇದು ಮನೆಮಂದಿಯೆಲ್ಲ ಕುಟುಂಬ ಸಮೇತರಾಗಿ ಬಂದು ಸಿನೆಮಾ ನೋಡುವಂತೆ ಮಾಡುತ್ತಿದೆ. ಎಲ್ಲ ವರ್ಗದ ಜನ ಯಾನವನ್ನು ಮುಕ್ತಕಂಠವಾಗಿ ಮೆಚ್ಚಿರುವುದರಿಂದಲೇ ಸಿನೆಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದರು.
ಚಿತ್ರದಲ್ಲಿ ಅನಂತ್ನಾಗ್, ಸುಹಾಸಿನಿ, ರಂಗಾಯಣ ರಘು, ಓಂ ಪ್ರಕಾಶ್ ರಾವ್, ರವಿಶಂಕರ್, ಗಡ್ಡಪ್ಪ, ಹುಚ್ಚ ವೆಂಕಟ್, ವೀಣಾ ಸುಂದರ್ ಮೊದಲಾವರು ನಟಿಸಿದ್ದು, ಎಲ್ಲರ ನಟನೆಯನ್ನು ಜನ ಮೆಚ್ಚಿದ್ದಾರೆ.
ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರು ಈ ಜನರೇಷನ್ನ ಯುವ ಮನಸ್ಸುಗಳನ್ನು ಗುರಿಯಾಗಿಟ್ಟುಕೊಂಡೇ ಇಡೀ ಸಿನಿಮಾ ರೂಪಿಸಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅನಾವಶ್ಯಕ ಎಂದು ತಮ್ಮದೇ ಸ್ಟೈಲಿನಲ್ಲಿ ಹೇಳುತ್ತ ಸರಿ-ತಪ್ಪುಗಳನ್ನು ನೋಡುಗರಿಗೆ ಬಿಡುತ್ತಾರೆ. ಇದೇ ಚಿತ್ರದ ಪ್ಲಸ್ ಪಾಯಿಂಟ್. ಇವರ ಈ ಕತೆ ಕಟ್ಟುವಿಕೆಗೆ ಬೆನ್ನೆಲುಬಾಗಿ ನಿಲ್ಲುವುದು ಕರಮ್ ಚಾವ್ಲಾ ಅವರ ಕ್ಯಾಮೆರಾ, ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುವ ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ. ಇದರ ಜೊತೆ ಜೊತೆಗೆ ಎಲ್ಲರ ಅಭಿನಯ, ಕೊನೆಗೆ ನೀಡುವ ಸಂದೇಶ ಚಿತ್ರ ಗೆಲ್ಲುವಂತೆ ಮಾಡಿದೆ.
Comments are closed.