ಮನೋರಂಜನೆ

ಗೆಳೆಯನನ್ನು ವರಿಸಿದ ಬಹುಭಾಷಾ ನಟಿ ‘ಅಹಂ ಪ್ರೇಮಾಸ್ಮಿ’ ನಾಯಕಿ

Pinterest LinkedIn Tumblr


ಬೆಂಗಳೂರು: ಬಹುಭಾಷಾ ನಟಿ ಆರ್ತಿ ಚಾಬ್ರಿಯಾ ಅವರು ತಮ್ಮ ಬಹುಕಾಲದ ಗೆಳೆಯನನ್ನು ವರಿಸುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆರ್ತಿ ಚಾಬ್ರಿಯಾ ಅವರು ಮುಂಬೈ ಮೂಲದ ವಿಶಾರದ್ ಬೀಡಸ್ಸಿ ಜೊತೆ ಸಪ್ತಪದಿ ತುಳಿದಿದ್ದಾರೆ. ಜೂನ್ 24ರಂದು ಅದ್ಧೂರಿಯಾಗಿ ಮದುವೆಯಾಗಿದ್ದು, ಇವರ ವಿವಾಹ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ನಟಿ ಆರ್ತಿ ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈಗಷ್ಟೇ ಮದುವೆಯಾಗಿದ್ದೇನೆ. ನಮ್ಮನ್ನು ಆಶೀರ್ವದಿಸಿ ಎಂದು ಆರ್ತಿಯವರು ಬರೆದಿದ್ದು, ಕೆಂಪು ಬಣ್ಣದ ಲೆಹೆಂಗ ತೊಟ್ಟು ಸಖತ್ ಮಿಂಚಿದ್ದಾರೆ. ಪತಿ ಕೂಡ ಗೋಲ್ಡನ್ ಮತ್ತು ಮರೂನ್ ಬಣ್ಣದ ಶೇರ್ವಾನಿ ಧರಿಸಿ ಇಬ್ಬರು ಮದುವೆ ಸಮಾರಂಭದಲ್ಲಿ ಮಿಂಚಿದ್ದಾರೆ.

ಆರ್ತಿ ಚಾಬ್ರಿಯಾ ಮತ್ತು ವಿಶಾರದ್ ಬೀಡಸ್ಸಿ ಇಬ್ಬರು ಮಾರ್ಚ್ ನಲ್ಲಿ ರಿಂಗ್ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರ್ತಿ ಮತ್ತು ವಿಶಾರದ್ ಇಬ್ಬರು ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರು ಪ್ರೀತಿ ವಿಚಾರದ ಬಗ್ಗೆ ಹೇಳಿಕೊಂಡಿರಲಿಲ್ಲ. ಇದೀಗ ಎರಡು ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.

ಆರ್ತಿ ಅವರು 2001ರಲ್ಲಿ ‘ಲಜ್ಜಾ’ ಎಂಬ ಹಿಂದಿ ಸಿನಿಮಾದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಆರ್ತಿ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಸೋದರ ಬಾಲಾಜಿ ಅಭಿನಯದ ‘ಅಹಂ ಪ್ರೇಮಾಸ್ಮಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್‍ಗೆ ಪಾದಾರ್ಪಣೆ ಮಾಡಿದ್ದರು.

ನಂತರ ಶಿವರಾಜ್ ಕುಮಾರ್ ಅಭಿನಯದ ‘ಸಂತ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾದಲ್ಲಿ ‘ಹಾರ್ಟ್ ಅನ್ನೋ ಅಡ್ಡಾದಲ್ಲಿ ಲವ್ ಅನ್ನು ಲಾಂಗು ಹಿಡಿದು’ ಎಂಬ ಹಾಡಿನ ಮೂಲಕ ಕನ್ನಡರಿಗೆ ಪರಿಚಿತರಾಗಿದ್ದಾರೆ. ಆರ್ತಿ ಮೂಲತಃ ಪಂಜಾಬಿಯವರಾಗಿದ್ದು, ಸಿನಿಮಾ ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದಾರೆ.

Comments are closed.