
‘ಐ ಲವ್ ಯೂ’ ಸಿನಿಮಾದಲ್ಲಿ ನಾನು ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರಿಂದ ನನ್ನಪ್ಪ- ಅಮ್ಮನಿಗೆ ಬಹಳ ನೋವಾಗಿದೆ. ಅವರು ಈಗಲೂ ನನ್ನನ್ನು ಚಿಕ್ಕ ಮಗುವಿನಂತೆಯೇ ನೋಡಿಕೊಳ್ಳುತ್ತಾರೆ. ನಾನು ತೆರೆಯ ಮೇಲೆ ಈ ರೀತಿ ಕಾಣಿಸಿಕೊಂಡಿದ್ದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ‘Sorry’ ಹೊರತು ಅವರಿಗೆ ಬೇರೇನೂ ಹೇಳಲು ನನಗೆ ಸಾಧ್ಯವಿಲ್ಲ ಎಂದು ನಟಿ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ.
ಉಪೇಂದ್ರ ಅವರ ಸಿನಿಮಾ ಎಂದರೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇರುತ್ತದೆ. ರಿಯಲ್ಸ್ಟಾರ್ ಉಪೇಂದ್ರ- ರಚಿತಾ ರಾಮ್ ಅಭಿಯನದ ‘ಐ ಲವ್ ಯೂ’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಆರ್. ಚಂದ್ರು ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ರಚಿತಾ ರಾಮ್ ಮನಬಿಚ್ಚಿ ಮಾತನಾಡಿದ್ದಾರೆ.
‘ಐ ಲವ್ ಯೂ’ ಸಿನಿಮಾದ ‘ಮಾತನಾಡಿ ಮಾಯವಾದೆ’ ಹಾಡಿನ ಹಸಿಬಿಸಿ ದೃಶ್ಯಗಳು ಸಾಕಷ್ಟು ಚರ್ಚೆಗೊಳಗಾಗಿತ್ತು. ಈ ಸಿನಿಮಾದಲ್ಲಿ ಉಪೇಂದ್ರ- ರಚಿತಾ ಬಹಳ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಈ ವಿಚಾರಕ್ಕೆ ಪ್ರಿಯಾಂಕಾ ಉಪೇಂದ್ರ ಕೂಡ ಮುನಿಸಿಕೊಂಡಿದ್ದರು ಎನ್ನಲಾಗಿತ್ತು. ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ರಚಿತಾ ಬಗ್ಗೆ ಕೆಲವರು ಅಸಮಾಧಾನವನ್ನೂ ಹೊರಹಾಕಿದ್ದರು. ಆದರೆ, ಆ ದೃಶ್ಯ ಸಿನಿಮಾಗೆ ಅಗತ್ಯವಾಗಿದ್ದರಿಂದ ಚಿತ್ರೀಕರಿಸಲಾಯಿತು ಎಂದು ರಚಿತಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ ರಚಿತಾ ರಾಮ್, ತಮ್ಮ ಕುಟುಂಬದವರು ಆ ಸಿನಿಮಾ ನೋಡಿ ಬಂದಾಗ ಬೇಸರಿಸಿಕೊಂಡಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ನಾನು ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮೊದಲೇ ಅಪ್ಪ-ಅಮ್ಮನಿಗೆ ಹೇಳಿದ್ದೆ. ಆದರೆ, ಮಾತು ಬೇರೆ, ತೆರೆಯಲ್ಲಿ ನೋಡೋದು ಬೇರೆ. ಹೀಗಾಗಿ, ಸಿನಿಮಾಗೆ ಹೋಗಿದ್ದ ಅಮ್ಮ ಬಹಳ ಬೇಸರಿಸಿಕೊಂಡಿದ್ದರು. ಅದಕ್ಕಾಗಿ ಇನ್ನು ಇಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಅಪ್ಪ, ಅಮ್ಮನ ಬಳಿ ಕ್ಷಮೆಯನ್ನೂ ಕೇಳಿದ್ದೆ. ಇನ್ನೆಂದೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಚಿತಾ ರಾಮ್ ಹೇಳಿದ್ದಾರೆ.
‘ನಮ್ಮ ಮಗಳಿಗೆ ಇದು ಬೇಡವಾಗಿತ್ತು’ ಎಂದು ಅಪ್ಪ-ಅಮ್ಮನಿಗೆ ಅನಿಸಿದೆ. ನನ್ನಪ್ಪ ಇನ್ನೂ ಆ ಸಿನಿಮಾ ನೋಡಿಲ್ಲ. ಆದರೆ, ಸಿನಿಮಾ ನೋಡಿಬಂದ ಅಮ್ಮನಿಂದ ವಿಷಯ ತಿಳಿದುಕೊಂಡು ‘ಐ ಲವ್ ಯೂ’ ಸಿನಿಮಾ ನೋಡೋದೇ ಇಲ್ಲ ಅಂದುಬಿಟ್ಟರು. ಮಗಳಾಗಿ ಮಾತ್ರವಲ್ಲ ನನ್ನನ್ನು ಓರ್ವ ಹೀರೋಯಿನ್ ಆಗಿ ಕೂಡ ಅಷ್ಟು ಬೋಲ್ಡ್ ಆಗಿ ತೆರೆಯ ಮೇಲೆ ನೋಡಲು ಇಷ್ಟಪಡುವುದಿಲ್ಲ ಎಂದು ಅಪ್ಪ ನೇರವಾಗಿಯೇ ಹೇಳಿದರು. ಅವರಿಗೆ ನನ್ನ ಈ ಪಾತ್ರದಿಂದ ಬಹಳ ನೋವಾಗಿದೆ ಎಂದು ಡಿಂಪಲ್ ಕ್ವೀನ್ ರಚಿತಾ ಕಣ್ಣೀರು ಹಾಕಿದ್ದಾರೆ.
.
ನಾನು ಇಂದು ಸಿನಿಮಾ ಕ್ಷೇತ್ರದಲ್ಲಿ ಇರುವುದಕ್ಕೆ ಅಪ್ಪ-ಅಮ್ಮನೇ ಕಾರಣ. ಅವರಿಗೋಸ್ಕರವೇ ನಾನು ಇಲ್ಲಿದ್ದೇನೆ. ನನ್ನ ಮೊದಲ ಆದ್ಯತೆ ಫ್ಯಾಮಿಲಿಗೆ. ನಾನು ಇಲ್ಲಿ ದುಡಿಯೋದರಿಂದಲೇ ಮನೆ ನಡೆಯಬೇಕೆಂದೇನೂ ಇಲ್ಲ. ಅವರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಬೇಸರವಾದರೆ ನಾನು ಕುಸಿದುಹೋಗುತ್ತೇನೆ. ಸಿನಿಮಾರಂಗದಲ್ಲಿ ಯಾರು ಏನು ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಆ ವಿಷಯದಲ್ಲಿ ಬಹಳ ಗಟ್ಟಿಗಿತ್ತಿ. ಆದರೆ, ಕುಟುಂಬದ ವಿಷಯ ಬಂದಾಗ ನಾನು ಬಹಳ ಭಾವುಕಳಾಗುತ್ತೇನೆ. ಇದೇ ಕೊನೆ, ಇನ್ನು ಹಾಟ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ರಚಿತಾ ರಾಮ್ ಬೇಸರಿಸಿಕೊಂಡಿದ್ದಾರೆ.
Comments are closed.