ಮನೋರಂಜನೆ

ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

Pinterest LinkedIn Tumblr


ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಹೆಸರುವಾಸಿಯಾದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಮಣಿರತ್ನಂ(63) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗಲೇ ಮಣಿರತ್ನಂ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮುಂಬೈನಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ನಿರ್ದೇಶಕ ಮಣಿರತ್ನಂ ಅವರ ಅನಾರೋಗ್ಯ ಕುರಿತಾಗಿ ಸಾಮಾಜಿಕ ಜಾಲತಾಣಗಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಣಿರತ್ನಂ ಅವರಿಗೆ ಈ ಹಿಂದೆಯೇ ಅಂದರೆ 2004 ರಲ್ಲಿ ‘ಯುವ’ ಸಿನಿಮಾ ಶೂಟಿಂಗ್ ನಲ್ಲಿದ್ದ ಸಂದರ್ಭದಲ್ಲಿ ಸೆಟ್‍ನಲ್ಲಿಯೇ ಹೃದಯಾಘಾತವಾಗಿತ್ತು. ಇದೇ ಕಾರಣದಿಂದ 2015 ರಲ್ಲಿ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಮಣಿರತ್ನಂ ಅವರು ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ‘ಅಮರಾರ್ ಕಲ್ಕಿ’ ಕಾದಂಬರಿಯನ್ನು ಆಧಾರಿತ ಚಿತ್ರವಾಗಿದೆ.

ಈ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳಾದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಅಮಿತಾಭ್ ಬಚ್ಚನ್, ಅಮಲಾ ಪೌಲ್, ಜಯರಾಮ್ ರವಿ, ಕಾರ್ತಿ ಮತ್ತು ಅನುಷ್ಕಾ ಶೆಟ್ಟಿ ಮುಂತಾದ ನಾಯಕರು ಅಭಿನಯಿಸುತ್ತಿದ್ದಾರೆ.

Comments are closed.