ಕನ್ನಡ ಮತ್ತು ತೆಲುಗಿನಲ್ಲಿ ‘ಮೈ ನೇಮ್ ಈಸ್ ರಾಜ್’ ಎಂಬ ಚಿತ್ರವೊಂದು ಬರುತ್ತಿರುವುದು ಗೊತ್ತಿದೆ. ಚಿತ್ರದ ಟೈಟಲ್ನಂತೆ ಹೀರೋ ಹೆಸರು ಕೂಡ ರಾಜ್. ಅಂದಹಾಗೆ ರಾಜನಿಗೆ ಈ ಚಿತ್ರದಲ್ಲಿ ಮೂವರು ರಾಣಿಯರು.
ಅದರಲ್ಲಿ ಒಂದು ನಾಯಕಿ ಪಾತ್ರದಲ್ಲಿ ‘ಕಿರಿಕ್ ಪಾರ್ಟಿ’ ಸಂಯುಕ್ತ ಹೆಗ್ಡೆ ಕಾಣಿಸಿಕೊಳ್ಳಬೇಕಿತ್ತು. ಮೊದಲು ಚಿತ್ರಕ್ಕೆ ಓಕೆ ಅಂದಿದ್ದ ಕಿರಿಕ್ ಹುಡ್ಗಿ ಬಳಿಕ ನೋ ಎಂದು ಕೈ ಕೊಟ್ಟಿದ್ದರು. ಇದಕ್ಕೆ ಮುಖ್ಯ ಕಾರಣ ಚಿತ್ರದ ಕಥೆ ಸಖತ್ ಹಾಟ್ ಆಗಿರುವುದು.
‘ಮೈ ನೇಮ್ ರಾಜ್’ ಸಿನಿಮಾ ‘ಅರ್ಜುನ್ ರೆಡ್ಡಿ’ ಯನ್ನು ಮೀರಿಸುವ ಚಿತ್ರವಂತೆ. ಅಂದರೆ ಚಿತ್ರದಲ್ಲಿ ಸಾಕಷ್ಟು ಲಿಪ್ ಲಾಕ್ ದೃಶ್ಯಗಳಿರಲಿವೆಯಂತೆ. ಈ ಸಿನಿಮಾದಲ್ಲಿ ಅಭಿನಯಿಸಲು ಅನೇಕ ಕನ್ನಡ ನಾಯಕಿಯರನ್ನು ಕೇಳಿಕೊಂಡಿದ್ದರು ಚಿತ್ರತಂಡ. ಆದರೆ ಕಥೆ ಕೇಳಿದ ಮೇಲೆ ಯಾರೂ ಕೂಡ ಒಪ್ಪಲಿಲ್ಲವಂತೆ. ಒಪ್ಪಿಕೊಂಡರೂ, ಹೊಸಬರ ಚಿತ್ರವೆಂದು ಸಂಯುಕ್ತ ಕೈಕೊಟ್ಟಳು ಎಂಬುದು ಚಿತ್ರತಂಡದ ಈಗಿನ ಆರೋಪ.
ಹೀಗಾಗಿ ಚಿತ್ರತಂಡದವರು ಮುಂಬೈ ಮೂಲದ ನಾಯಕಿಯರನ್ನು ಕರೆ ತಂದಿದ್ದಾರೆ. ಅದರಲ್ಲಿ ಇಬ್ಬರು ಆಕರ್ಷಕ ಹಾಗೂ ನಸ್ರೀನ್. ಸದ್ಯ ಚಿತ್ರೀಕರಣ ಮುಗಿಸಿರುವ ‘ಮೈ ನೇಮ್ ಈಸ್ ರಾಜ್’ನಲ್ಲಿ ನಸ್ರೀನ್ ಮೈ ಚಳಿ ಬಿಟ್ಟು ಕಾಣಿಸಿಕೊಂಡಿದ್ದಾರಂತೆ. ‘ಸಂಚಾರಿ’ ಮತ್ತು ‘ಜಟಾಯು’ ಎಂಬ ಎರಡು ಚಿತ್ರಗಳನ್ನು ಮಾಡಿದ್ದ ರಾಜ್ ಸಹೋದರರೇ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
‘ಕಿರಿಕ್ ಪಾರ್ಟಿ’ ಮೂಲಕ ಸಿನಿ ಇನಿಂಗ್ಸ್ ಆರಂಭಿಸಿದ ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಸೀನ್ ಮೂಲಕವೇ ಸಖತ್ ಸುದ್ದಿಯಾಗುತ್ತಿದ್ದರೆ, ಇತ್ತ ಅದೇ ಚಿತ್ರದಿಂದ ಬೆಳಕಿಗೆ ಬಂದ ಸಂಯುಕ್ತ ಹೆಗ್ಡೆ ಲಿಪ್ ಲಾಕ್ಗೆ ಮಾಡಲ್ಲವೆಂದು ಸುದ್ದಿಯಾಗಿದ್ದಾರೆ. ಒಟ್ಟಾರೆ ಕೆಲ ವರ್ಷಗಳಿಂದ ಸಂಯುಕ್ತರನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಬೇಕೆಂಬ ಅಭಿಮಾನಿಗಳು ಆಸೆ ಈಡೇರಲು ಇನ್ನೊಂದಿಷ್ಟು ದಿನ ಕಾಯಬೇಕಿರುವುದು ದಿಟ.