ಮನೋರಂಜನೆ

ಪತ್ರಕರ್ತನ ಮೊಬೈಲ್ ಕಸಿದಿದ್ದಕ್ಕೆ ಸಲ್ಮಾನ್ ಖಾನ್ ವಿರುದ್ಧ ದೂರು!

Pinterest LinkedIn Tumblr


ಮುಂಬೈ: ಬಾಲಿವುಡ್ ಭಾಯಿಜಾನ್ ನಟ ಸಲ್ಮಾನ್ ಖಾನ್ ಪತ್ರಕರ್ತನ ಮೊಬೈಲ್ ಕಸಿದಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

ಅಶೋಕ್ ಶ್ಯಾಂ ಲಾಲ್ ಪಾಂಡೆ ದೂರು ನೀಡಿದ ಪತ್ರಕರ್ತ. ಸಲ್ಮಾನ್ ಗುರುವಾರ ಬೆಳಗ್ಗೆ ಸೈಕಲ್‍ನಲ್ಲಿ ಜುಹೂವಿನಿಂದ ಕಂದಿವಾಲಿ ಕಡೆ ಹೋಗುತ್ತಿದ್ದರು. ಈ ವೇಳೆ ಪತ್ರಕರ್ತ ಅಶೋಕ್ ತಮ್ಮ ಕ್ಯಾಮೆರಾಮೆನ್ ಜೊತೆ ನಟ ಸಲ್ಮಾನ್ ಖಾನ್ ಪಕ್ಕದಲ್ಲೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕ್ಯಾಮೆರಾಮೆನ್ ವಿಡಿಯೋ ಮಾಡಿದ್ದಾರೆ.

ಇದನ್ನು ಗಮನಿಸಿದ ಸಲ್ಮಾನ್ ವಿಡಿಯೋ ತೆಗೆಯಬೇಡಿ ಎಂದು ಹೇಳಿದ್ದಾರೆ. ಸಲ್ಮಾನ್ ಎಚ್ಚರಿಕೆ ನೀಡಿದ್ದರೂ ಕ್ಯಾಮೆರಾಮೆನ್ ವಿಡಿಯೋ ತೆಗೆಯುವುದನ್ನು ನಿಲ್ಲಿಸಿರಲಿಲ್ಲ. ಈ ವೇಳೆ ಸಲ್ಮಾನ್ ಖಾನ್ ತನ್ನ ಬಾಡಿಗಾರ್ಡ್ಸ್ ಗಳಿಗೆ ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಅವರಿಗೆ ತಿಳಿಸಿ ಎಂದು ಹೇಳಿದ್ದಾರೆ.

ಬಾಡಿಗಾರ್ಡ್ಸ್ ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದಾಗ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಡಿಕ್ಕಿಯಲ್ಲಿ ಏನೋ ತೆಗೆದುಕೊಳ್ಳುವ ರೀತಿ ನಟಿಸಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಅಶೋಕ್ ಹಾಗೂ ಕ್ಯಾಮೆರಾಮೆನ್ ಸಲ್ಮಾನ್ ಖಾನ್‍ನನ್ನು ಹಿಂಬಾಲಿಸಿ ಮತ್ತೆ ಅವರ ವಿಡಿಯೋ ಸೆರೆ ಹಿಡಿದಿದ್ದಾರೆ.

ಮತ್ತೆ ವಿಡಿಯೋ ಮಾಡುವುದನ್ನು ಗಮನಿಸಿದ ಸಲ್ಮಾನ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಅಲ್ಲಿ ಟ್ರಾಫಿಕ್ ಜಾಮ್ ಕೂಡ ಆಗುತ್ತಿತ್ತು. ಜನರಿಗೆ ತೊಂದರೆ ಆಗಬಾರದು ಎಂದು ಸಲ್ಮಾನ್ ಖಾನ್ ಆತನ ಮೊಬೈಲ್ ಕಸಿದುಕೊಂಡಿದ್ದಾರೆ. ಸ್ವಲ್ಪ ದೂರ ಹೋಗಿ ಸಲ್ಮಾನ್ ತನ್ನ ಬಾಡಿಗಾರ್ಡ್ ಮೂಲಕ ಆ ಮೊಬೈಲ್ ಮರಳಿ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಮೊಬೈಲ್ ಕಸಿದುಕೊಂಡಿದಕ್ಕೆ ಅಶೋಕ್ ಮುಂಬೈನ ಡಿಎನ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಲ್ಮಾನ್ ಖಾನ್ ಬಾಡಿಗಾರ್ಡ್ ಕೂಡ ಕ್ರಾಸ್ ದೂರು ನೀಡಿದ್ದಾರೆ. ಸಲ್ಮಾನ್ ಖಾನ್ ಅನುಮತಿ ಪಡೆಯದೇ ಅವರನ್ನು ಹಿಂಬಾಲಿಸಿ ವಿಡಿಯೋ ಮಾಡಿದ್ದಾರೆ ಎಂದು ಬಾಡಿಗಾರ್ಡ್ ದೂರು ದಾಖಲಿಸಿದ್ದಾರೆ.

Comments are closed.