ಮನೋರಂಜನೆ

ಗರಿಗೆದರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್​ರ​​ ‘ರಾಬರ್ಟ್: ಕುತೂಹಲಕಾರಿ ಪ್ರಶ್ನೆಯಾಗಿರುವ ನಾಯಕಿ ಆಯ್ಕೆ!

Pinterest LinkedIn Tumblr


ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ‘ರಾಬರ್ಟ್’​ ಚಿತ್ರದ ತಯಾರಿಗಳು ಗರಿಗೆದರಿದೆ. ಇದರ ಬೆನ್ನಲ್ಲೇ ಚಿತ್ರದ ನಾಯಕಿ ಯಾರಗಲಿದ್ದಾರೆಂಬ ಕುತೂಹಲಕಾರಿ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಮತ್ತೊಂದು ಕಾರಣ ಗಾಂಧಿನಗರದಲ್ಲಿ ‘ರಾಬರ್ಟ್’​ ಫಸ್ಟ್​ ಲುಕ್ ಮೂಲಕ ಎಬ್ಬಿಸಿರುವ ಹವಾ.

ಡಿ ಬಾಸ್ ಅಭಿನಯದ ಈ ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಅನ್ಯ ಭಾಷಾ ನಾಯಕಿಯನ್ನು ಕರೆ ತರಲಿದ್ದಾರೆಂಬ ಸುದ್ದಿಗಳು ಹುಟ್ಟಿಕೊಂಡಿದೆ. ಈಗಾಗಲೇ ಚಿತ್ರತಂಡದ ಲೀಸ್ಟ್​ನಲ್ಲಿ ‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ‘ಪ್ರೇಮಂ’ ಸುಂದರಿ ಸಾಯಿ ಪಲ್ಲವಿ ಹೆಸರುಗಳಿದ್ದು, ಇಬ್ಬರಲ್ಲಿ ಒಬ್ಬರು ಹೀರೊಯಿನ್ ಆಗಲಿದ್ದಾರೆಂಬ ವದಂತಿಗಳು ಹರಿದಾಡುತ್ತಿದೆ.

ಅನುಷ್ಕಾ ಶೆಟ್ಟಿ ಹೆಸರು ಹಿಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದಿತ್ತಾದರೂ, ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿರಲಿಲ್ಲ. ಇನ್ನು ಸಾಯಿ ಪಲ್ಲವಿ ಟಾಲಿವುಡ್, ಕಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈಗ ಅವರ ಮುಂದಿರುವುದು ಸ್ಯಾಂಡಲ್​ವುಡ್ ಮಾತ್ರ. ಹೀಗಾಗಿ ರೌಡಿ ಬೇಬಿ ಸಾಯಿ ಸ್ಟಾರ್ ನಟನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಈ ಇಬ್ಬರು ನಟಿಯರ ಹೆಸರಿನೊಂದಿಗೆ ಮುಂಚೂಣಿಯಲ್ಲಿರುವುದು ನಟಿ ಪ್ರಣೀತಾ ಸುಭಾಷ್.

ಪ್ರಣೀತಾ ಸುಭಾಷ್ ರಾಬರ್ಟ್​ ಮೂಲಕ ಸ್ಯಾಂಡಲ್​ವುಡ್ ರಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ದರ್ಶನ್​ ಜತೆ ‘ಪೊರ್ಕಿ’ ಸಿನಿಮಾದಲ್ಲಿ ಸಖತ್ತಾಗವ್ಳೆ..ಸುಮ್ನೆ ನಗ್ತಾಳೆ ಎಂದು ಮೋಡಿ ಮಾಡಿದ್ದ ಪ್ರಣೀತಾ, ಬಳಿಕ ಕಾಲಿವುಡ್ ಮತ್ತು ಟಾಲಿವುಡ್​ನತ್ತ ಮುಖ ಮಾಡಿದ್ದರು. ಇದೀಗ ಕನ್ನಡದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಚಾಲೆಂಜಿಂಗ್ ಸ್ಟಾರ್ ಚಿತ್ರದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಾಗೆಯೇ ಇತ್ತೀಚೆಗೆ ಪ್ರಣೀತಾ ‘ರಾಮನ ಅವತಾರ’ ಎಂಬ ಚಿತ್ರವೊಂದನ್ನು ಬಿಟ್ಟರೆ ಇನ್ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಹೀಗಾಗಿ ರಾಬರ್ಟ್ ರಾಣಿಯಾಗಿ ಪ್ರಣೀತಾ ಕಾಣಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ತರುಣ್ ಸುಧೀರ್, ಚಿತ್ರದ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿದೆ. ಇಂತಹ ವದಂತಿಗಳನ್ನು ಯಾರೂ ನಂಬಬೇಡಿ. ರಾಬರ್ಟ್​ನ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ತಾರಾಗಣದ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ‘ಯಜಮಾನ’ನ ಪಕ್ಕದಲ್ಲಿ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣರನ್ನು ನೋಡಿದ ಅಭಿಮಾನಿಗಳಂತು ಈ ಬಾರಿ ದರ್ಶನ್ ಜೋಡಿಯಾಗಿ ಸಖತ್ ಸುಂದರಿಯನ್ನು ಮಾತ್ರ ಎದುರು ನೋಡುತ್ತಿರುವುದು ಸುಳ್ಳಲ್ಲ.

Comments are closed.