ರಾಷ್ಟ್ರೀಯ

ಮೋದಿ ಆಸ್ತಿ ಎಷ್ಟು? ಎಷ್ಟು ಏರಿಕೆಯಾಗಿದೆ?

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಕಣಕ್ಕಿಳಿದಿರುವ ಪ್ರಧಾನಿ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದು ತನ್ನ ಬಳಿ ಒಟ್ಟು 2.5 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

4 ಬಾರಿ ಗುಜರಾತ್ ಸಿಎಂ ಆಗಿ ಕರ್ತವ್ಯ ನಿರ್ವಹಿಸಿ, ಈಗ ಪ್ರಧಾನ ಮಂತ್ರಿ ಆಗಿ ಆಡಳಿತ ನಡೆಸುತ್ತಿರುವ ಮೋದಿ ತಮ್ಮ ಸರ್ಕಾರಿ ವೇತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿಯ ಆಸ್ತಿ ಮೌಲ್ಯದಲ್ಲಿ 86 ಲಕ್ಷ ರೂ. ಏರಿಕೆಯಾಗಿದೆ. ಜಶೋಧಾಬೇನ್ ಅವರನ್ನು ಮೋದಿ ತನ್ನ ಪತ್ನಿ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

1967ರಲ್ಲಿ ಗುಜರಾತ್ ಬೋರ್ಡ್ ನಡೆಸುವ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಬಿ.ಎ ಪದವಿ, 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ ಎಂದು ಮೋದಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಸ್ತಿ ಎಷ್ಟಿದೆ?
ಅಧಿಕಾರ ಕೈಯಲ್ಲಿ ಇದ್ದರೂ ಮೋದಿ ಬಳಿ ಯಾವುದೇ ಮನೆ ಮತ್ತು ಜಮೀನು ಇಲ್ಲ. ಸರ್ಕಾರಿ ವೇತನ ಮತ್ತು ಬ್ಯಾಂಕ್ ಬಡ್ಡಿಯೇ ಮೋದಿ ಅವರ ಆದಾಯದ ಮೂಲವಾಗಿದ್ದು, ಯಾವುದೇ ಸಾಲ ಇಲ್ಲ, ಕ್ರಿಮಿನಲ್ ಕೇಸ್ ಸಹ ಇಲ್ಲ. ಮೋದಿ ಕೈಯಲ್ಲಿ ಕೇವಲ 38 ಸಾವಿರ ರೂ. ನಗದು ಹಣ ಇದೆ.

ಮೋದಿಯ ಒಟ್ಟು ಆಸ್ತಿ 2.5 ಕೋಟಿ ರೂಪಾಯಿಗಳಿದ್ದು, ಅದರಲ್ಲಿ 1.27 ಕೋಟಿ ರೂ.ಗಳಷ್ಟು ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್), ಹಾಗೆಯೇ 38,750 ರೂ. ನಗದು ಹಣ ಅವರ ಕೈಯಲ್ಲಿ ಇದೆ.

ನಮೋ ಒಟ್ಟು 1.41 ಕೋಟಿ ರೂ. ಚರಾಸ್ತಿಯನ್ನು ಹೊಂದಿದ್ದು, ಸುಮಾರು 1.1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹಾಗೆಯೇ ತೆರೆಗೆ ಉಳಿತಾಯ ಇನ್ಫ್ರಾ ಬಾಂಡ್‍ಗಳ ಮೇಲೆ 20 ಸಾವಿರ ರೂ. ಹಾಕಿದ್ದು, ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‍ನಲ್ಲಿ(ಎನ್‍ಎಸ್‍ಸಿ) 7.61 ಲಕ್ಷ ರೂ ಹಾಗೂ 1.9 ಲಕ್ಷ ರೂಪಾಯಿಗಳ ಎಲ್‍ಐಸಿ ಪಾಲಿಸಿ ಹೊಂದಿದ್ದಾರೆ.

ಖಾಸಗಿ ಬ್ಯಾಂಕ್ ಖಾತೆಯಲ್ಲಿ ಕೇವಲ 4,143 ರೂ. ಉಳಿತಾಯವನ್ನು ಮಾಡಿದ್ದಾರೆ. ಅಲ್ಲದೆ 45 ಗ್ರಾಂ ತೂಕದ ಒಟ್ಟು 4 ಬಂಗಾರದ ಉಂಗುರಗಳಿದ್ದು, ಅದು 1.13 ಲಕ್ಷ ರೂ. ಬೆಲೆಬಾಳುತ್ತದೆ. ಹಾಗೆಯೇ ಗಾಂಧಿನಗರದ ಸೆಕ್ಟರ್-1ರಲ್ಲಿ 1.1 ಕೋಟಿ ರೂ. ಮೌಲ್ಯದ 3,531 ಚದರ ಅಡಿ ವಿಸ್ತೀರ್ಣದ ಜಾಗ ಹೊಂದಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಈ ಹಿಂದೆ 2014ರಲ್ಲಿ ಅಫಿಡವಿಟ್‍ನ ಪ್ರಕಾರ ಮೋದಿ 1.56 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದರು.

2019ರಲ್ಲಿ ಮೋದಿ ಬಳಿಯಿರುವ ಆಸ್ತಿ ಎಷ್ಟು?
* 2.51 ಕೋಟಿ ಮೌಲ್ಯದ ಆಸ್ತಿ
* ಸ್ಥಿರಾಸ್ತಿ ಮೌಲ್ಯ – 1.1 ಕೋಟಿ ರೂ.
* ಚರಾಸ್ತಿ ಮೌಲ್ಯ – 1.41 ಕೋಟಿ ರೂ.
* ವಾರ್ಷಿಕ ಆದಾಯ -19.92 ಲಕ್ಷ ರೂ.
* ಆದಾಯದ ಮೂಲ – ಸರ್ಕಾರ ಕೊಡುವ ವೇತನ, ಬ್ಯಾಂಕ್‍ನ ಬಡ್ಡಿ ಹಣ
* ಕೈಯಲ್ಲಿರುವ ನಗದು – 38,750 ರೂ.
* ಬ್ಯಾಂಕ್‍ನಲ್ಲಿರುವ ನಗದು – 4,143 ರೂ.
* ಫಿಕ್ಸೆಡ್ ಡಿಪಾಸಿಟ್ – 1,27,81,574 ರೂ.
* ಬಾಂಡ್- 20,000 ರೂ.
* ಇನ್ಶುರೆನ್ಸ್, ಎನ್‍ಎಸ್‍ಸಿ -9,51,813 ರೂ.
* ಚಿನ್ನದ ಮೌಲ್ಯ -1,13,800 ರೂ. (4 ಉಂಗುರ)
* ಇತರೆ ಆಸ್ತಿ -2,26,040 ರೂ.
* ಗಾಂಧಿನಗರದಲ್ಲಿನ ಮನೆಯಲ್ಲಿ ಮೋದಿ ಪಾಲು ಶೇ.25

2014ರಲ್ಲಿ ಮೋದಿ ಬಳಿಯಿದ್ದ ಆಸ್ತಿ ಎಷ್ಟು?
* 1 ಕೋಟಿ 65 ಲಕ್ಷ ರೂ. ಮೊತ್ತದ ಆಸ್ತಿ
* ಕೈಯಲ್ಲಿದ್ದ ದುಡ್ಡು – 29 ಸಾವಿರ ರೂ.
* ಬ್ಯಾಂಕ್ ಠೇವಣಿ – 44 ಲಕ್ಷದ 23 ಸಾವಿರ ರೂ.
* ಉಳಿತಾಯ ಬಾಂಡ್‍ಗಳು – 4 ಲಕ್ಷದ 34 ಸಾವಿರ ರೂ
* ಆಭರಣ – 1 ಲಕ್ಷದ 35 ಸಾವಿರ ರೂ.
* ಚಿರಾಸ್ತಿ ಒಟ್ಟು ಮೊತ್ತ – 51 ಲಕ್ಷದ 57 ಸಾವಿರ ರೂ.
* ಗಾಂಧಿನಗರದಲ್ಲಿ 1 ಕೋಟಿ ರೂ. ಮೌಲ್ಯದ ಕಟ್ಟಡ

Comments are closed.