ಮನೋರಂಜನೆ

‘ಶಬ್ದವೇಧಿ’ ಚಿತ್ರೀಕರಣ ಸಂದರ್ಭ ನಾರಾಯಣ್​ ಅವರನ್ನು ರಾಜ್​ ತರಾಟೆಗೆ ತೆಗೆದುಕೊಂಡಿದ್ದು ಏಕೆ ಗೊತ್ತಾ?

Pinterest LinkedIn Tumblr


ಇಂದು (ಬುಧವಾರ) ವರನಟ ಡಾ.ರಾಜ್ ಹುಟ್ಟುಹಬ್ಬ. ನಿರ್ದೇಶಕ ಎಸ್.ನಾರಾಯಣ್ ತಮ್ಮ ’ಶಬ್ದವೇಧಿ’ ಚಿತ್ರದಲ್ಲಿ ತಾವು ಕಂಡ ರಾಜ್​ ಅವರನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

ಡಾ.ರಾಜಕುಮಾರ್ ಅಭಿನಯದ ‘ಶಬ್ದವೇಧಿ’ ನಿರ್ದೇಶನದ ಸಂದರ್ಭ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿತ್ತು. ಮುಂಜಾನೆ 6 ಗಂಟೆಗೆ ಶೂಟಿಂಗ್ ಶುರು ಮಾಡೋದು ನಾನು ರೂಢಿಸಿಕೊಂಡು ಬಂದ ಪದ್ಧತಿ. ಆದರೆ ಅಣ್ಣಾವರ ಸಿನಿಮಾ ಸಂದರ್ಭದಲ್ಲಿ ಇದನ್ನು ಪಾಲನೆ ಮಾಡಲು ಸಾಧ್ಯವಾಗಲಿಲ್ಲ. ‘ಅವರಿಗೆ ಶ್ರಮವಾಗುತ್ತದೆ. 6 ಗಂಟೆಗೆ ಬೇಡ. ಅವರು ವ್ಯಾಯಾಮ ಮಾಡಿ ನಿಧಾನಕ್ಕೆ ಬರಲಿ’ ಎಂದು ಪಾರ್ವತಮ್ಮ ರಾಜ್​ಕುಮಾರ್ ಸೂಚಿಸಿದ್ದರು. ಸರಿ ಎಂದು ನಾನು ನನ್ನ ಮನಸ್ಸಿನಿಂದ 6 ಗಂಟೆ ಶೂಟಿಂಗ್ ವಿಷಯ ತೆಗೆದುಹಾಕಿದೆ.

ಹಾಗೆಂದು ಶೂಟಿಂಗ್ ತಡವಾಗಿ ಆರಂಭಿಸುವುದು ನನ್ನಿಂದ ಆಗದ ಮಾತು. ಅದಕ್ಕಾಗಿ ಆ ಸಮಯದಲ್ಲಿ ಬೇರೆ ಕಲಾವಿದರ ದೃಶ್ಯಗಳನ್ನು ಚಿತ್ರೀಕರಿಸುವುದೆಂದು ನಿರ್ಧರಿಸಿದ್ದೆ. ಒಂದು ದಿನ ಹೀಗೆ ಬೆಳಗ್ಗೆ 6 ಗಂಟೆಗೆ ಶೂಟಿಂಗ್ ಎಂದು ಹೊರಟೆ. ಹೋಟೆಲ್​ನಲ್ಲಿ ತಂಗಿದ್ದ ಅಣ್ಣಾವ್ರು ಸಿಟ್ಔಟ್​ನಲ್ಲಿ ವ್ಯಾಯಾಮ ಮಾಡುತ್ತಿದ್ದರು.

ನನ್ನ ಕಾರು ಹಾದು ಹೋಗಿದ್ದು ಅವರಿಗೆ ಕಾಣಿಸಿದೆ. ತಕ್ಷಣವೇ ಮ್ಯಾನೇಜರ್​ಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಚಿತ್ರೀಕರಣದ ವಿಷಯ ತಿಳಿದವರೇ ವ್ಯಾಯಾಮ ನಿಲ್ಲಿಸಿ ಸ್ನಾನದ ಮನೆಗೆ ಓಡಿದ್ದಾರೆ. ಬೇಗನೆ ಮೈಮೇಲೆ ಎರಡು ಬಿಂದಿಗೆ ನೀರು ಸುರುದುಕೊಂಡು ಓಡುತ್ತಲೇ ಕಾರು ಹತ್ತಿ ಸೆಟ್​ಗೆ ಬಂದು ಬಿಟ್ಟಿದ್ದರು!

ಅಲ್ಲಿಗೆ ಬಂದವರೇ, ‘ಅಲ್ಲಾ, ನೀವು ಯಾಕೆ ಇಲ್ಲಿಗೆ ಬಂದ್ರಿ ನಾರಾಯಣ್?’ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡರು. ‘ಸಾರ್ ಚಿತ್ರೀಕರಣ ಇದೆಯೆಲ್ಲ’ ಅಂದೆ. ಅದಕ್ಕೆ ರಾಜ್, ‘ಅಲ್ಲಾರೀ ನೀವು ಇಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ನಾನಲ್ಲಿ ಏನ್ ಮಾಡ್ಲಿ? ನಾನೂ ಶೂಟಿಂಗ್​ನಲ್ಲಿ ಇರ್ತಿನಿ’ ಅಂದ್ರು. ಅವರ ಕರ್ತವ್ಯ ಪ್ರಜ್ಞೆ ಎದುರು ನಾನೇನು ಮಾತನಾಡಲು ಸಾಧ್ಯ?

Comments are closed.