ಮನೋರಂಜನೆ

ಕವಲುದಾರಿಯಲ್ಲಿ ಹೊಸ ಬೆಳಕು : ಪುನೀತ್‌ ನಿರ್ಮಾಣದ ಮೊದಲ ಚಿತ್ರ

Pinterest LinkedIn Tumblr


‘ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಚಿತ್ರ ಒಂದು ವಿಭಿನ್ನ ಕಥಾಹಂದರವುಳ್ಳ ಚಿತ್ರವಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಈ ಮೂಲಕ ಹೇಮಂತ್‌ ರಾವ್‌ ಎಂಬ ನಿರ್ದೇಶಕ ಕೂಡಾ ಬೆಳಕಿಗೆ ಬಂದರು. ಆ ಚಿತ್ರದ ನಂತರ ಹೇಮಂತ್‌ ನಿರ್ದೇಶಿಸಿರುವ ಚಿತ್ರ “ಕವಲುದಾರಿ’. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ವಿಶೇಷವೆಂದರೆ ಪುನೀತ್‌ರಾಜಕುಮಾರ್‌ ಅವರ ಪಿ.ಆರ್‌.ಕೆ. ಬ್ಯಾನರ್‌ ನ ಮೊದಲ ಸಿನಿಮಾವಿದು. ರಿಷಿ ಈ ಚಿತ್ರದ ನಾಯಕ. ಚಿತ್ರದಲ್ಲಿ ಅನಂತ್‌ನಾಗ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ರೋಶನಿ ಪ್ರಕಾಶ್‌ ನಾಯಕಿ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹೇಮಂತ್‌, ‘ಚಿತ್ರದಲ್ಲಿ ಸಾಕಷ್ಟು ಹೊಸ ವಿಚಾರವನ್ನು ಹೇಳಿದ್ದೇವೆ. ಇದೊಂದು ಮರ್ಡರ್‌ ಮಿಸ್ಟರಿ ಸಿನಿಮಾವಾದರೂ, ಸಾಮಾಜಿಕವಾಗಿ ಪ್ರಸ್ತುತವಾಗಿರುವ ಅಂಶಗಳ ಹಿನ್ನೆಲೆಯಲ್ಲಿ ಹೇಳಿದ್ದೇವೆ. ಜೊತೆಗೆ ಸಮಾಜದಲ್ಲಿ ಪೊಲೀಸ್‌ ಆಫೀಸರ್‌ಗಳ ಸ್ಥಾನಮಾನ ಹೇಗಿದೆ, ಸಮಾಜ ಅವರನ್ನು ಹೇಗೆ ನೋಡುತ್ತದೆ ಎಂಬ ವಿಚಾರವನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಜೊತೆಗೆ ಚಿತ್ರದ ಸಂಗೀತವನ್ನು ಹೊರದೇಶದಲ್ಲಿ ಮಾಡಿಸಿದ್ದು, ಸೌಂಡಿಂಗ್‌ ತುಂಬಾ ಚೆನ್ನಾಗಿದೆ. ಛಾಯಾಗ್ರಹಣದಲ್ಲೂ ಹೊಸ ವಿಚಾರವನ್ನು ಪ್ರಯತ್ನಿಸಿದ್ದೇವೆ’ ಎನ್ನುತ್ತಾರೆ.

‘ಚಿತ್ರ ಭಾರತದಾದ್ಯಂತ ಇಂದು ಬಿಡುಗಡೆಯಾಗುತ್ತಿದ್ದು, ಸುಮಾರು 20 ನಗರಗಳಲ್ಲಿ ತೆರೆಕಾಣುತ್ತಿದೆ. ಸದ್ಯದಲ್ಲೇ ವಿದೇಶಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ’ ಎಂದರು. ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕವಾಗಿ ಚಿಂತಿಸುವ ಅಂಶಗಳನ್ನು ಹೇಳಲು ಪ್ರಯತ್ನಿಸಿದ್ದೇವೆ ಎನ್ನಲು ಹೇಮಂತ್‌ ಮರೆಯಲಿಲ್ಲ.

ಚಿತ್ರದ ನಾಯಕ ರಿಷಿಗೆ ಈ ಸಿನಿಮಾ ಬ್ರೇಕ್‌ ನೀಡುವ ವಿಶ್ವಾಸವಿದೆ. ಅದಕ್ಕೆ ಕಾರಣ ಚಿತ್ರದ ಕಂಟೆಂಟ್‌. “ದೇಶವೇ ಕವಲುದಾರಿಯಲ್ಲಿ ಇರುವ ಸಮಯದಲ್ಲಿ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಸರಿಯಾದ ಸಮಯಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ ಅನಿಸುತ್ತದೆ. ದೇಶದ ಮನಸ್ಥಿತಿ ಹಾಗೂ ನಮ್ಮ ಚಿತ್ರದ ಕಂಟೆಂಟ್‌ ತುಂಬಾ ಪ್ರಸ್ತುತವಾಗಿದೆ. ಇನ್ನು, ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಹಿಟ್‌ ಆಗಿವೆ. ಕೇಳಿದವರು ತುಂಬಾ ಫ್ರೆಶ್‌ ಆಗಿದೆ ಎನ್ನುತ್ತಿದ್ದಾರೆ. ಸಿನಿಮಾದಲ್ಲಿ ಬಹಳಷ್ಟು ಹೊಸ ವಿಚಾರಗಳನ್ನು ಹೇಳಿದ್ದೇವೆ’ ಎಂದರು.

ಚಿತ್ರದಲ್ಲಿ ನಟಿಸಿರುವ ಅನಂತ್‌ನಾಗ್‌ ಅವರಿಗೆ ಈ ಪಾತ್ರ ತುಂಬಾ ಖುಷಿಕೊಟ್ಟಿದೆಯಂತೆ. ಈ ಹಿಂದೆ ಹೇಮಂತ್‌ ಅವರ ‘ಗೋಧಿ ಬಣ್ಣ’ದಲ್ಲೂ ನಟಿಸಿದ್ದು, ಮತ್ತೂಮ್ಮೆ ಒಳ್ಳೆಯ ಪಾತ್ರ ಸಿಕ್ಕ ಖುಷಿ ಅನಂತ್‌ ಅವರದು. ಉಳಿದಂತೆ ಚಿತ್ರದ ನಾಯಕಿ ರೋಶನಿ ಪ್ರಕಾಶ್‌, ಸಂಗೀತ ನಿರ್ದೇಶಕ ಚರಣ್‌ ರಾಜ್‌, ವಿತರಕ ಧೀರಜ್‌ ಕೂಡಾ ಮಾತನಾಡಿದರು. ನಿರ್ಮಾಪಕ ಪುನೀತ್‌ರಾಜಕುಮಾರ್‌ ಚಿತ್ರ ಬಿಡುಗಡೆಯ ಖುಷಿಯನ್ನು ಹಂಚಿಕೊಂಡರು.

Comments are closed.