ಮುಂಬೈ

ರಾತ್ರಿಯಿಡೀ ಸಿನಿಮಾ ನೋಡುತ್ತಿದ್ದ ಪತ್ನಿಯನ್ನು ಕೊಂದು ಶರಣಾದ ಪತಿ

Pinterest LinkedIn Tumblr


ಮುಂಬೈ: ಇಡೀ ರಾತ್ರಿ ಮೊಬೈಲಿನಲ್ಲಿ ಸಿನಿಮಾ ನೋಡುತ್ತಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಬುಧವಾರ ಮಹಾರಾಷ್ಟ್ರದ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

ಚೇತನ್ ಚೌಗುಲೆ(32) ಪತ್ನಿಯನ್ನು ಕೊಲೆ ಮಾಡಿದ ಪತಿ. ತನ್ನ ಪತ್ನಿ ಇಡೀ ರಾತ್ರಿ ಮೊಬೈಲಿನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಕ್ಕೆ ಕೋಪಗೊಂಡ ಚೇತನ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಈ ವಿಚಾರಕ್ಕಾಗಿ ನನಗೂ ಹಾಗೂ ನನ್ನ ಪತ್ನಿ ನಡುವೆ ನಿರಂತರವಾಗಿ ಜಗಳ ನಡೆಯುತಿತ್ತು. ಅಲ್ಲದೆ ನನಗೆ ನಿದ್ದೆ ಮಾಡಲು ಆಗುತ್ತಿಲ್ಲ ಸಿನಿಮಾ ನೋಡುವುದನ್ನು ನಿಲ್ಲಿಸು ಎಂದು ನನ್ನ ಪತ್ನಿಗೆ ಹೇಳಿದ್ದೆ. ಆದರೆ ಆಕೆ ನನ್ನ ಮಾತು ಕೇಳಲು ನಿರಾಕರಿಸಿದಳು ಎಂದು ಚೇತನ್ ಪೊಲೀಸರ ಬಳಿ ಹೇಳಿದ್ದಾನೆ.

ನಾನು ನಿದ್ದೆ ಮಾಡಿ ಬೆಳಗ್ಗೆ 4 ಗಂಟೆಗೆ ಎದ್ದಾಗ ಆಕೆ ಇನ್ನೂ ಯೂಟ್ಯೂಬ್‍ನಲ್ಲಿ ಸಿನಿಮಾ ನೋಡುತ್ತಿದ್ದಳು. ಆಗ ನನಗೆ ಕೋಪ ಬಂದು ನೈಲಾನ್ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದೆ. ಬಳಿಕ ನಾನೇ ಠಾಣೆಗೆ ಬಂದು ಶರಣಾಗಿದ್ದೇನೆ ಎಂದು ಎಂದು ಚೇತನ್ ತಿಳಿಸಿದ್ದಾನೆ.

ಚೇತನ್ ಕೊಲೆ ಮಾಡಿದ ಬಳಿಕ ಆತನಿಗೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಅಷ್ಟರಲ್ಲಿ ಆತನ ಪತ್ನಿ ಮೃತಪಟ್ಟಿದ್ದಳು. ಚೇತನ್ ಕೋಪದಿಂದ ಈ ಕೊಲೆ ಮಾಡಿರುವುದಾಗಿ ನಮ್ಮ ಬಳಿ ಹೇಳಿಕೊಂಡಿದ್ದಾನೆ. ಅಲ್ಲದೆ ಶರಣಾಗಲು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಜೋಡಿಗೆ ಎರಡು ವರ್ಷದ ಮಗು ಇದ್ದು, ಈ ಘಟನೆ ನಡೆದಾಗ ಮಗು ಮನೆಯಲ್ಲಿಯೇ ಇತ್ತು. ನಾವು ಚೇತನ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.