ಮನೋರಂಜನೆ

ರಣಂ’ ಚಿತ್ರದ ಶೂಟಿಂಗ್​ ವೇಳೆ ಸಿಲಿಂಡರ್​ ಸ್ಫೋಟದಲ್ಲಿ ಇಬ್ಬರ ಸಾವು ಪ್ರಕರಣ; ‘ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಂಧನ

Pinterest LinkedIn Tumblr

ಬೆಂಗಳೂರು: ಶೂಟಿಂಗ್​ ವೇಳೆ ಸಿಲಿಂಡರ್​ ಸ್ಫೋಟಗೊಂಡು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಟ ಚೇತನ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಚಿತ್ರದ ಶೂಟಿಂಗ್​ ವೇಳೆ ಸಿಲಿಂಡರ್​ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ಅವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ‘ರಣಂ’ನ ಪ್ರಮುಖ ಸನ್ನಿವೇಶದ ಶೂಟಿಂಗ್​ ವೇಳೆ ಬೆಂಕಿಯ ದೃಶ್ಯಕ್ಕಾಗಿ ಸಿಲಿಂಡರ್ ಬಳಸಿದ್ದರು. ಈ ವೇಳೆ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಚಿತ್ರೀಕರಣ ವೀಕ್ಷಿಸುತ್ತಿದ್ದ ತಾಯಿ ಮತ್ತು ಮಗು ಮೃತಪಟ್ಟಿದ್ದರು. ಘಟನೆ ನಂತರ ಚಿತ್ರದ ನಿರ್ಮಾಪಕ ಶ್ರೀನಿವಾಸ​ ಅವರು ತಲೆಮರಿಸಿಕೊಂಡಿದ್ದರು.

ಇಂದು ಅವರನ್ನು ಬಾಗಲೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬಹು ತಾರಾಗಣದ ಈ ರಣಂ ಚಿತ್ರದಲ್ಲಿ ಚೇತನ್‌ ಮತ್ತು ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಅವತಾರದಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಬಣ್ಣ ಹಚ್ಚಿದ್ದಾರೆ. ವಿ. ಸಮುದ್ರ ನಿರ್ದೇಶನದ ಈ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.

Comments are closed.