ಮನೋರಂಜನೆ

ಸುಮಲತಾಗೆ ಸಿನೆಮಾ ಮಂದಿಯಾಗಿ ಅಲ್ಲ, ಮನೆ ಮಕ್ಕಳಾಗಿ ಬೆಂಬಲಿಸುತ್ತೇವೆ: ಯಶ್

Pinterest LinkedIn Tumblr


ಬೆಂಗಳೂರು: ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಸುಮಲತಾ ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಮೊದಲಿಂದಲೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆಯವರೊಂದಿಗೆ ಒಡನಾಟ ಇದೆ. ಅವರ ಮನೆಯಲ್ಲಿ ದರ್ಶನ್ ದೊಡ್ಡ ಮಗನಂತಿದ್ದಾರೆ. ಅಕ್ಕ ಒಂದು ನಿರ್ಧಾರ ತಗೊಂಡಿದ್ದಾರೆ. ಅದಕ್ಕೆ ನಾವು ಯೋಚನೆ ಮಾಡುವ ಅಗತ್ಯ ಇಲ್ಲ. ಅಕ್ಕ ಎಲ್ಲಿ ಹೆಜ್ಜೆ ಇಡುತ್ತಾರೋ ಅವರನ್ನ ನಾವು ಹಿಂಬಾಲಿಸುತ್ತೇವೆ ಎಂದು ಹೇಳಿದರು.

ಅಂಬರೀಶಣ್ಣ ನಮಗೆ ತುಂಬಾ ಅನುಕೂಲ ಮಾಡಿದ್ದಾರೆ. ಮಂಡ್ಯ ಜನಕ್ಕೆ ಅಂಬರೀಶಣ್ಣ ಯಾರು? ಏನು ಅಂತ ಗೊತ್ತು. ಅಷ್ಟು ವರ್ಷ ಜನರ ಪ್ರೀತಿ ಗಳಿಸೋದು ಸುಲಭವಲ್ಲ. ಅಂಬರೀಶಣ್ಣ ಮಂಡ್ಯದ ಮನೆಮಗ. ಸುಮಲತಾ ಯಾಕೆ ಸ್ಪರ್ಧಿಸುತ್ತಿದ್ದಾರೆ ಅಂತ ಅರ್ಥ ಮಾಡ್ಕೋಬೇಕು. ಇದು ಸೂಕ್ಷ್ಮವಾದ ವಿಚಾರ, ಅವರು ರಾಜಕೀಯ ಲಾಭಕ್ಕಾಗಿ ಸ್ಪರ್ಧಿಸುತ್ತಿಲ್ಲ. ಮಂಡ್ಯದ ನಂಟಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಸುಮಲತಾ ಅವರ ಪರ ಯಶ್ ಬ್ಯಾಟಿಂಗ್ ಮಾಡಿದರು.

ಮಂಡ್ಯದ ಜನತೆಗೆ ಅಂಬರೀಶ್ ಪ್ರೀತಿ ಮೀರಿ ದೊಡ್ಡ ಶಕ್ತಿ ಇದೆ. ಮಂಡ್ಯದ ಜನತೆಗೆ ಜ್ಞಾನ, ಶಕ್ತಿ, ಪ್ರೀತಿ, ಒಡನಾಟ, ತಾಳ್ಮೆ, ಸಹನೆ ಎಲ್ಲ ಇದೆ. ಮಂಡ್ಯದ ಜನ ಅಂಬರೀಶ್ ಕುಟುಂಬವನ್ನು ಕೈ ಬಿಡಲ್ಲ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಸದಾ ಜೊತೆಗಿರುತ್ತೇವೆ ಎಂದು ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.

Comments are closed.