
ಚೆನ್ನೈ: ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ರಜನಿಕಾಂತ್ ಅವರು ಇಂದು ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ಸೌಂದರ್ಯ ಅವರು ಉದ್ಯಮಿ ವಿಶಾಖನ್ ಅವರ ಜೊತೆ ಇಂದು ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆಗೆ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಟ ಕಮಲ್ ಹಾಸನ್ ಆಗಮಿಸಿದ್ದರು. ಶುಕ್ರವಾರ ಸೌಂದರ್ಯ ಅವರ ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ರಜಿನಿಕಾಂತ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ಕಾರ್ಯಕ್ರಮದ ನಂತರ ಸೌಂದರ್ಯ ತಮ್ಮ ತಂದೆ, ಮಗ ಹಾಗೂ ಪತಿ ಜೊತೆ ಇರುವ ಫೋಟೋ ಹಾಕಿ, “ನನ್ನ ಜೀವನದ ಮುಖ್ಯ ಪುರುಷರು” ಎಂದು ಟ್ವೀಟ್ ಮಾಡಿದ್ದರು.
ಈ ಹಿಂದೆ 2010ರಲ್ಲಿ ಸೌಂದರ್ಯಾ ಉದ್ಯಮಿ ಅಶ್ವಿನ್ ಅವರನ್ನು ವರಿಸಿದ್ದರು. ಈ ದಂಪತಿಗೆ ಗಂಡು ಮಗು ಜನಿಸಿದ್ದು `ವೇದ್’ ಎಂದು ಹೆಸರನ್ನಿಟ್ಟಿದ್ದರು. ದಂಪತಿ ಮಧ್ಯೆ ಹೊಂದಾಣಿಕೆಯಾಗದ ಕಾರಣ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ವಿಶಾಖನ್ ಪತ್ರಿಕಾ ಸಂಪಾದಕಿಯಾಗಿದ್ದ ಕನಿಕಾ ಅವರನ್ನು ಈ ಹಿಂದೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನ ಸರಿ ಹೋಗದ ಕಾರಣ ಅವರು ವಿಚ್ಛೇದನ ಪಡೆದಿದ್ದರು. ಪ್ರಸಿದ್ಧ ಉದ್ಯಮಿ ವನಂಗಮುಡಿ ಅವರ ಪುತ್ರರಾಗಿರುವ ವಿಶಾಖನ್ ಔಷಧಿ ವ್ಯವಹಾರವನ್ನು ನಡೆಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ `ವಂಜಗರ್ ಉಗಾಗಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ವಿಶಾಖನ್ ನಟಿಸಿದ್ದರು.
ಅಭಿಮಾನಿಗಳು ಈ ಹಿಂದೆ ವಿಚ್ಛೇದನ ಕುರಿತಂತೆ ಪ್ರಶ್ನೆ ಕೇಳಿದ್ದಕ್ಕೆ ಸೌಂದರ್ಯಾ, ನನ್ನ ಮದುವೆ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಸುದ್ದಿಗಳು ಸತ್ಯವಾಗಿದೆ. ಕೆಲ ವರ್ಷಗಳಿಂದ ನಾವಿಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದೇವೆ. ವಿಚ್ಛೇದನ ವಿಚಾರ ಪ್ರಕ್ರಿಯೆಯಲ್ಲಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು. ಸೌಂದರ್ಯಾ ತಂದೆ ರಜಿನಿಕಾಂತ್ ಅವರಿಗಾಗಿ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಿದ್ದರು.
Comments are closed.