ಮನೋರಂಜನೆ

ಕನ್ನಡ ಸ್ಟಾರ್ ನಟರ ಮನೆಯ ಮೇಲಿನ ಮುಂದುವರಿದ ಐಟಿ ದಾಳಿ ! ದಾಖಲೆಗಳ ಪರಿಶೀಲನೆ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಕೂಡ ನಟ ಯಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಲೆಕ್ಕಪತ್ರಗಳ ಪರಿಶೀಲನೆ ಮುಂದುವರೆದಿದೆ.

ನಿರ್ಮಾಪಕ ವಿಜಯ್ ಕಿರಗಂದೂರ್, ಪುನೀತ್ ಮನೆಯಲ್ಲಿ ಶೋಧ ಮುಕ್ತಾಯವಾಗಿದ್ದು, ನಟ ಶಿವರಾಜ್ ಕುಮಾರ್ ಮನೆಯಲ್ಲಿ ಇಂದು ಬೆಳಗ್ಗೆಯವರೆಗೂ ಪರಿಶೀಲನಾ ಕಾರ್ಯ ಮುಂದುವರಿಯಿತು.

ಪುನೀತ್ ರಾಜ್‍ಕುಮಾರ್ ಮನೆಯಲ್ಲಿನ ಶೋಧ ಕಾರ್ಯ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯಗೊಂಡಿದೆ. ಆದರೆ ಯಶ್ ಮತ್ತು ಸುದೀಪ್ ಮನೆಯಲ್ಲಿ ಪರಿಶೀಲನೆ ಮುಂದುವರಿಯಲಿದೆ. ಜೊತೆಗೆ ನಿರ್ಮಾಪಕರಾದ ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಇಂದು ಕೂಡ ಪರಿಶೀಲನೆ ಮುಂದುವರಿಯಲಿದೆ.

ನಿನ್ನೆ ನಟ ಪುನೀತ್ ರಾಜಕುಮಾರ್​ ಮನೆ‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಿವಾಸಕ್ಕೆ ಆಡಿಟರ್ಸ್ ಗಳನ್ನು ಕರೆಸಿಕೊಂಡಿದ್ದರು. ಪುನೀತ್ ರಾಜ್ ಕುಮಾರ್​ ಕುಟುಂಬದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತಿರುವ ಇಬ್ಬರು ಆಡಿಟರ್ಸ್ ಇದೀಗ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈಗಾಗಲೇ ಐಟಿ ಅಧಿಕಾರಿಗಳು ಪುನೀತ್ ಆರ್ಥಿಕ ವ್ಯವಹಾರಗಳು ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಜಂಟಿ ಆಯುಕ್ತ ರಮೇಶ್​ ಅವರೇ ಖುದ್ದು, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರನ್ನ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.

ಯಶ್, ರಾಕ್ ಲೈನ್ ಮನೆಯಲ್ಲಿ ಮುಂದುವರೆದ ಶೋಧ
ಸ್ಟಾರ್ ನಟರ ಮನೆ ಮೇಲಿನ ರೇಡ್ ಒಂದು ಹಂತಕ್ಕೆ ಮುಕ್ತಾಯವಾಗಿದ್ದರೂ ನಟ ಯಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದಲ್ಲಿನ ಶೋಧಕಾರ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

Comments are closed.