ಮನೋರಂಜನೆ

KGF; ವಾರದ ಮೊದಲೇ ಆನ್ ಲೈನ್ ಬುಕ್ಕಿಂಗ್

Pinterest LinkedIn Tumblr


ಬೆಂಗಳೂರು: ಟ್ರೈಲರ್ ಮೂಲಕವೇ ಈಗಾಗಲೇ ಎಲ್ಲೆಡೆ ಭರ್ಜರಿಯಾಗಿ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್” ಡಿಸೆಂಬರ್ 21ಕ್ಕೆ ದೇಶ, ವಿದೇಶಗಳಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಏತನ್ಮಧ್ಯೆ ಕೆಜಿಎಫ್ ರಿಲೀಸ್ ಆಗಲು ಒಂದು ವಾರ ಇರುವಾಗಲೇ ಆನ್ ಲೈನ್ ಬುಕ್ಕಿಂಗ್ ಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

ಈ ಶುಕ್ರವಾರದಿಂದಲೇ ಬಹುನಿರೀಕ್ಷೆಯ ಕೆಜಿಎಫ್ ಸಿನಿಮಾದ ಆನ್ ಲೈನ್ ಬುಕ್ಕಿಂಗ್ ಬೆಂಗಳೂರು, ತುಮಕೂರು, ಹಾಸನ ಸೇರಿದಂತೆ ರಾಜ್ಯಾದ್ಯಂತ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ತುಮಕೂರಿನ ಮೈಲಾರ ಥಿಯೇಟರ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಸ್ಥಗಿತಗೊಂಡಿದೆ. ಸರ್ವರ್ ಕ್ರ್ಯಾಶ್ ನಿಂದಾಗಿ ಟಿಕೆಟ್ ಬುಕ್ಕಿಂಗ್ ನಿಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಅತೀ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ದಿನದ ಶೋ ನೋಡಲು ಸಿನಿ ಪ್ರಿಯರು, ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದರಿಂದ ಕೆಜಿಎಫ್ ಬಿಡುಗಡೆಗೂ ಮುನ್ನ ಟಿಕೆಟ್ ಗೆ ಭರ್ಜರಿ ಬೇಡಿಕೆ ಬಂದಿದೆ.

ಅಮೆರಿಕ ಮತ್ತು ಕೆನಡಾದಲ್ಲಿ ಕೆಜಿಎಫ್ ಡಿಸೆಂಬರ್ 20ರಂದೇ ತೆರೆ ಕಾಣುತ್ತಿದೆ. ಏತನ್ಮಧ್ಯೆ ಕೆಜಿಎಫ್ ಸಿನಿಮಾ ಟಿಕೆಟ್ ಕೂಡಾ ಅತೀ ಹೆಚ್ಚಿನ ಬೆಲೆಗೆ ಬ್ಲ್ಯಾಕ್ ನಲ್ಲಿ ಮಾರಾಟವಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಮುಂಬೈನ ಕೊಳಗೇರಿಯಿಂದ ಕೋಲಾರದ ಚಿನ್ನದ ಗಣಿಯವರೆಗೆ ತಳುಕು ಹಾಕಿಕೊಂಡಿರುವ ಕಥಾ ಹಂದರವನ್ನು ಕೆಜಿಎಫ್ ಹೊಂದಿದ್ದು, ಈಗಾಗಲೇ ಪಂಚಭಾಷೆಯಲ್ಲಿ ಬಿಡುಗಡೆಗೊಂಡಿರುವ ಟ್ರೈಲರ್ ಗೆ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್ ನ ಘಟಾನುಘಟಿ ನಟರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ನಾಯಕ ನಟನಾಗಿ ಯಶ್, ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಛಾಯಾಗ್ರಾಹಕರಾಗಿ ಭುವನ್ ಗೌಡ, ಶಿವಕುಮಾರ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Comments are closed.