ರಾಷ್ಟ್ರೀಯ

ಕೊನೆಗೂ ಅಶೋಕ್​ ಗೆಹ್ಲೋಟ್ ಪಾಲಾದ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ

Pinterest LinkedIn Tumblr


ನವದೆಹಲಿ: ತೀವ್ರ ಪೈಪೋಟಿ ನಡೆದಿದ್ದ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ಕೊನೆಗೂ ಅಶೋಕ್​ ಗೆಹ್ಲೋಟ್​ ಪಾಲಾಗಿದೆ. ಸಿಎಂ ರೇಸ್​ನಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಪಟ್ಟು ಹಿಡಿದಿದ್ದ ಸಚಿನ್​ ಪೈಲಟ್​ ಅವರಿಗೆ ಕಾಂಗ್ರೆಸ್​ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ.

ರಾಜಸ್ಥಾನ ನೂತನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಉಪಮುಖ್ಯಮಂತ್ರಿ ಸಚಿನ್ ಪೈಲಟ್​ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದ ಕೆ.ಸಿ.ವೇಣುಗೋಪಾಲ್​ ಮಧ್ಯಾಹ್ನ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ಹೈಕಮಾಂಡ್​ ತೆಗೆದುಕೊಂಡ ನಿರ್ಧಾರ ಪ್ರಕಟಿಸಿದರು.

ಕಾಂಗ್ರೆಸ್​ ಹೈಕಮಾಂಡ್​ ನೀಡಿರುವ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಸಚಿನ್ ಪೈಲಟ್​ ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್​ ಕಳೆದ 36 ಗಂಟೆಗಳಿಂದ ನಿರಂತರ ಸಭೆಗಳನ್ನು ನಡೆಸಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಪಾಲ್ಗೊಂಡಿದ್ದರು.

ಮಧ್ಯಪ್ರದೇಶದಲ್ಲೂ ಮುಖ್ಯಮಂತ್ರಿ ಗಾದಿಗೆ ಕಮಲನಾಥ್ ಮತ್ತು ಜ್ಯೋತಿರಾಧ್ಯ ಸಿಂದ್ಯಾ ನಡುವೆಯೂ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನೆನ್ನೆ ರಾಹುಲ್​ ಗಾಂಧಿ ಅವರು ಕಮಲನಾಥ್ ಅವರನ್ನು ಸಿಎಂ ಆಗಿ ಘೋಷಣೆ ಮಾಡಿದರು. ಘೋಷಣೆಗೂ ಮುನ್ನ ರಾಹುಲ್ ಇವರಿಬ್ಬರೊಂದಿಗೆ ಇರುವ ಫೋಟೋವನ್ನು ಟ್ವೀಟ್​ ಮಾಡಿದ್ದರು. ಅದರಂತೆ ಇಂದು ಕೂಡ ರಾಜಸ್ಥಾನದ ಇಬ್ಬರೂ ಮುಖಂಡರೊಂದಿಗೆ ನಿಂತಿರುವ ಫೋಟೋದೊಂದಿಗೆ ‘ದ ಯುನೈಟೆಡ್​ ಕಲರ್ಸ್​ ಆಫ್ ರಾಜಸ್ಥಾನ’ (ರಾಜಸ್ಥಾನದ ಏಕತೆಯ ಬಣ್ಣಗಳು) ಎಂದು ಟ್ವೀಟ್​ ಮಾಡಿದ್ದರು. ಈ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಾಗಲಿದ್ದೇವೆ ಎಂಬ ಸಂದೇಶ ನೀಡಿದ್ದರು.

Comments are closed.