ಅಂತರಾಷ್ಟ್ರೀಯ

ವಿಮಾನದಲ್ಲಿ ಲೈಂಗಿಕ ದೌರ್ಜನ್ಯ; ಭಾರತದ ಟೆಕ್ಕಿಗೆ ಅಮೆರಿಕದಲ್ಲಿ 9 ವರ್ಷ ಜೈಲುಶಿಕ್ಷೆ

Pinterest LinkedIn Tumblr


ವಾಷಿಂಗ್ಟನ್​: ಇದೇ ವರ್ಷದ ಆರಂಭದಲ್ಲಿ ವಿಮಾನದಲ್ಲಿ ಮಲಗಿದ್ದ ಸಹ ಪ್ರಯಾಣಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಟೆಕ್ಕಿಗೆ ಅಮೆರಿಕ ನ್ಯಾಯಾಲಯ 9 ವರ್ಷಗಳ ಜೈಲುಶಿಕ್ಷೆ ನೀಡಿದೆ.

ಎಚ್​-1ಬಿ ವೀಸಾ ಅಡಿ ತಮಿಳುನಾಡಿನ ಪ್ರಭು ರಾಮಮೂರ್ತಿ 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಒಂಭತ್ತು ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ರಾಮಮೂರ್ತಿಯನ್ನು ಗಡಿಪಾರು ಮಾಡುವಂತೆ ಫೆಡರಲ್​ ಕೋರ್ಟ್​ ಆದೇಶದಲ್ಲಿ ತಿಳಿಸಿದೆ.

ತೀರ್ಪು ನೀಡಿದ ನ್ಯಾಯಮೂರ್ತಿ ಟೆರೆನ್ಸ್​ ಬೆರ್ಜ್​ ಅವರು, ಇಂತಹ ಅಪರಾಧಗಳನ್ನು ತಡೆಗಟ್ಟಲು ಈ ಆದೇಶ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಪರಾಧಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಫೆಡರಲ್​ ಫಿರ್ಯಾದುದಾರರು ಕೋರಿದ್ದರು.

ವಿಮಾನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಭದ್ರತೆ ಮತ್ತು ಸುರಕ್ಷತೆ ಅವರ ಹಕ್ಕಾಗಿದೆ. ಅಸಂಬದ್ಧ ನಡವಳಿಕೆ ತೋರುವವರನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತರು ಗಟ್ಟಿಯಾಗಿ ದನಿ ಎತ್ತಿ, ನ್ಯಾಯ ಕೇಳಿಕೊಂಡು ಬಂದಿದ್ದನ್ನು ನಾವು ಶ್ಲಾಘಿಸಬೇಕು ಎಂದು ಆದೇಶದ ನಂತರ ಯುಎಸ್​ ಅಟಾರ್ನಿ ಮಾಥ್ಯೂ ಶಿಂಡರ್​ ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್​ನಲ್ಲಿ ರಾಮಮೂರ್ತಿಯನ್ನು ಆರೋಪಿಯನ್ನಾಗಿ ಮಾಡಿ, ಐದು ದಿನಗಳ ಕಾಲ ವಿಚಾರಣೆ ನಡೆಸಿ, ಇಂದು ಈ ತೀರ್ಪು ನೀಡಲಾಗಿದೆ.

ಸಂತ್ರಸ್ತೆ ಹೇಳಿಕೆ ಪ್ರಕಾರ, ಜನವರಿ 3ರಂದು ಲಾಸ್​ ವೆಗಾಸ್​ನಿಂದ ಡೆಟ್ರಾಯ್ಟ್​ಗೆ ವಿಮಾನದಲ್ಲಿ ಪ್ರಯಾಣ ಮಾಡಲಾಗುತ್ತಿತ್ತು. ರಾಮಮೂರ್ತಿ ತನ್ನ ಹೆಂಡತಿ ಜೊತೆ ಕುಳಿತ್ತಿದ್ದರು. ಈ ವೇಳೆ ತನ್ನ ಪಕ್ಕದಲ್ಲಿ ಕುಳಿತಿದ್ದ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಹೇಳಿಕೆ ದಾಖಲಿಸಿದ್ದರು.

ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗೆ ಈ ಆದೇಶವೇ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಾಕಷ್ಟು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಇಂತಹ ಪ್ರಕರಣಗಳಿಗೆ ಗಂಭೀರ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಫ್​ಬಿಐ ಹೇಳಿದೆ.

ತಮಿಳುನಾಡು ಮೂಲದವರಾದ ರಾಮಮೂರ್ತಿ ಪೋಷಕರು ರೈತರಾಗಿದ್ದಾರೆ. ತನ್ನ ಪದವಿ ಮುಗಿದ ಮೇಲೆ ರಾಮಮೂರ್ತಿ 2015ರ ಜುಲೈನಲ್ಲಿ ಅಮೆರಿಕದ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.

Comments are closed.