ಮನೋರಂಜನೆ

ತೋತಾಪುರಿಯಲ್ಲಿ ಆದಿತಿ ಮುಸ್ಲಿಂ ಹುಡುಗಿ

Pinterest LinkedIn Tumblr


ಜಗ್ಗೇಶ್‌ ಅಭಿನಯದ, ವಿಜಯ ಪ್ರಸಾದ್‌ ನಿರ್ದೇಶನದ “ತೋತಾಪುರಿ’ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಈಗಾಗಲೇ ಸುಮಾರು 25 ದಿನಗಳ ಕಾಲ ಬನ್ನೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣಕ್ಕೆ ಬ್ರೇಕ್‌ ನೀಡಿದ್ದ ಚಿತ್ರತಂಡ ಈಗ ಮತ್ತೆ ಚಿತ್ರೀಕರಣ ಆರಂಭಿಸಿದೆ. ನಿನ್ನೆಯಿಂದ ಬನ್ನೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ನಟ ಜಗ್ಗೇಶ್‌, ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

ಚಿತ್ರದಲ್ಲಿ ನಾಯಕಿ ಅದಿತಿಯ ಪಾತ್ರವೇನು, ಯಾವ ರೀತಿಯ ಪಾತ್ರವಿರಬಹುದು ಎಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೆ ಕಾರಣ ನಿರ್ದೇಶಕ ವಿಜಯಪ್ರಸಾದ್‌ ಸಿನಿಮಾ. ವಿಜಯ ಪ್ರಸಾದ್‌ ಅವರ ಸಿನಿಮಾಗಳನ್ನು ನೋಡಿದರೆ ಅಲ್ಲಿ ನಾಯಕಿಗೆ ಸಾಕಷ್ಟು ವಿಭಿನ್ನ ಹಾಗೂ ಬೋಲ್ಡ್‌ ಪಾತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಅದೇ ಕಾರಣದಿಂದ ಅದಿತಿ ಪಾತ್ರದ ಬಗ್ಗೆಯೂ ಕುತೂಹಲವಿತ್ತು. ಈಗ ಅದಿತಿ ಪಾತ್ರವೇನು ಎಂಬ ರಹಸ್ಯ ಬಯಲಾಗಿದೆ.

“ತೋತಾಪುರಿ’ಯಲ್ಲಿ ಅದಿತಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶಕೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರ ಸಖತ್‌ ಬೋಲ್ಡ್‌ ಆಗಿದೆಯಂತೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅದಿತಿ, ಸಹಜವಾಗಿಯೇ ಸಿನಿಮಾ ಬಗ್ಗೆ ಎಕ್ಸೆ„ಟ್‌ ಆಗಿದ್ದಾರೆ. ಇನ್ನು ಚಿತ್ರದಲ್ಲಿ ಜಗ್ಗೇಶ್‌ ಅವರ ಪಾತ್ರ ಹಾಗೂ ಗೆಟಪ್‌ ಕೂಡಾ ಭಿನ್ನವಾಗಿದ್ದು, ಮತ್ತೂಂದು ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಈ ಚಿತ್ರವನ್ನು ಕೆ.ಎ.ಸುರೇಶ್‌ ನಿರ್ಮಿಸುತ್ತಿದ್ದಾರೆ. ಅಂದಹಾಗೆ, “ಧೈರ್ಯಂ’ ಚಿತ್ರದ ಮೂಲಕ ನಾಯಕಿಯಾದ ಅದಿತಿ ಸದ್ಯ “ಬಜಾರ್‌’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇದಲ್ಲದೇ, ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರಕ್ಕೂ ಅದಿತಿ ನಾಯಕಿ. ವಿಜಯ್‌ ಅವರ “ಕುಸ್ತಿ’ ಚಿತ್ರಕ್ಕೂ ಅದಿತಿ ನಾಯಕಿಯಾಗಿದ್ದರು.

ಆದರೆ, “ಕುಸ್ತಿ’ ಚಿತ್ರ ಬದಿಗೊತ್ತಿ ಚಿತ್ರತಂಡ ಹೊಸ ಚಿತ್ರ ಮಾಡುವುದಾಗಿ ಘೋಷಿಸಿದೆ. ಆ ಚಿತ್ರದಲ್ಲೂ ಅದಿತಿ ನಾಯಕಿಯಾಗಿರುತ್ತಾರೆಂಬುದನ್ನು ಕಾದು ನೋಡಬೇಕಿದೆ. ಇನ್ನು, “ಆಪರೇಷನ್‌ ನಕ್ಷತ್ರ’ ಚಿತ್ರದಲ್ಲೂ ಅದಿತಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, “ತೋತಾಪುರಿ’ ಚಿತ್ರತಂಡ ಬನ್ನೂರಿನಲ್ಲಿ ಚಿತ್ರೀಕರಣ ಮುಗಿಸಿ, ಮಡಿಕೇರಿ ಹಾಗೂ ಕೇರಳ ಕಡೆ ಪಯಣ ಬೆಳೆಸಲಿದೆ.

Comments are closed.