ಮನೋರಂಜನೆ

ತೆಲುಗು ನೆಲದಲ್ಲಿ ‘ಕೆ.ಜಿ.ಎಫ್’​ಗೆ ರಾಜಮೌಳಿ ಸಾರಥ್ಯ

Pinterest LinkedIn Tumblr


ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ದಂಡಯಾತ್ರೆಗೆ ಸಜ್ಜಾಗಿದ್ದಾರೆ. ಕೆ.ಜಿ.ಎಫ್ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸಲು ಪರಭಾಷೆ ನೆಲಕ್ಕೆ ದಂಡೆತ್ತಿ ಹೋಗುತ್ತಿದ್ದಾರೆ. ತೆಲುಗು ನೆಲದಲ್ಲೂ ಸಹ ಕನ್ನಡದ ‘ರಾಜಾಹುಲಿ’ ಅಬ್ಬರಿಸೋಕೆ ನಿಂತಿದ್ದು, ಅದಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ಬೆಂಬಲ ಕೊಡಲಿದ್ದಾರೆ. ಈ ಕುರಿತ ಒಂದು ವರದಿ ನಿಮಗಾಗಿ.

‘ಕೆ.ಜಿ.ಎಫ್’ – ಚಂದನವನದ ಸದ್ಯದ ದೊಡ್ಡ ಸಿನಿಮಾ. ಟ್ರೈಲರ್​ನಿಂದಲೇ ದೂಳೆಬ್ಬಿಸುತ್ತಿರೋ ಚಿತ್ರ. ಸ್ಯಾಂಡಲ್‍ವುಡ್‍ನ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡುತ್ತೆ ಎಂದು ಅಂದಾಜಿಸಲಾಗುತ್ತಿರುವ ಸಿನಿಮಾ. ನೂರು ಕೋಟಿ ಕ್ಲಬ್‍ಗೆ ಸೇರಲಿರೋ ಮೊದಲ ಕನ್ನಡ ಸಿನಿಮಾ ಎಂದೂ ಹೇಳಲಾಗುತ್ತಿದೆ. ಇಂತಹ’ಕೆ.ಜಿ.ಎಫ್‍’ಗೆ ಪರಭಾಷೆಯ ಖ್ಯಾತ ನಾಮರ ಬೆಂಬಲ ಹಾಗೂ ಸಹಕಾರ ಸಿಗುತ್ತಿದೆ. ಹೀಗಾಗಿ ಬಾಲಿವುಡ್-ಟಾಲಿವುಡ್-ಕಾಲಿವುಡ್‍ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಕನ್ನಡದ ಸಿನಿಮಾ.

ಕನ್ನಡದ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡೋದಕ್ಕೆ ಮೂಲ ಕಾರಣನೇ ಫರ್ಹಾನ್ ಅಖ್ತರ್. ಇವರು ಯಾವಾಗ ‘ಕೆ.ಜಿ.ಎಫ್‍’ನ ಹಿಂದಿ ಭಾಷೆಯ ಸಿನಿಮಾದ ವಿತರಣೆ ಮಾಡೋಕೆ ಮುಂದೆ ಬಂದರೋ ಆಗಲೇ ಈ ಚಿತ್ರದ ದಿಕ್ಕೇ ಬದಲಾಯಿತು. ಆ ನಂತರ ‘ಕೆ.ಜಿ.ಎಫ್’ ಕನ್ನಡ ಚಿತ್ರವಾಗಿ ಮಾತ್ರ ಉಳಿಯಲಿಲ್ಲ. ಬಹು ನಿರೀಕ್ಷಿತ ಬಹು ಭಾಷಾ ಸಿನಿಮಾವಾಗಿ ಬದಲಾಗಿ ಹೋಯಿತು ‘ಕೆ.ಜಿ.ಎಫ್’.

ಇನ್ನು ‘ಕೆ.ಜಿ.ಎಫ್’ ತೆಲುಗಿನಲ್ಲೂ ತೆರೆ ಕಾಣಲಿರುವ ವಿಷಯ ತಿಳಿದಿರುವುದೆ. ಕನ್ನಡದ ಈ ಚಿತ್ರಕ್ಕೆ ಕನ್ನಡಿಗರಿಗಿಂತ ಹೆಚ್ಚಾಗಿ ತೆಲುಗಿನವರೇ ಬೆಂಬಲ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ‘ಕೆ.ಜಿ.ಎಫ್’ ತೆಲುಗು ಟ್ರೈಲರ್ ಯೂಟ್ಯೂಬ್‍ನಲ್ಲಿ ಟ್ರೆಂಡ್ ಆಗಿದ್ದು. ಇದರಿಂದ ಇನ್ನಷ್ಟು ಹುಮ್ಮಸ್ಸು ಅಲ್ಲಿನ ವಿತರಕರಿಗೆ ಸಿಕ್ಕಿದೆ. ಹೀಗಾಗಿ ‘ಕೆ.ಜಿ.ಎಫ್’ ಸಿನಿಮಾ ತೆರೆಗೂ ಮುನ್ನ ತೆಲುಗು ಸೀಮೆಯಲ್ಲಿ ಒಂದು ಪ್ರೀ ರಿಲೀಸ್ ಈವೆಂಟ್ ಮಾಡುವ ತಯಾರಿ ನಡೆಯುತ್ತಿದೆ. ಇದರ ಆಕರ್ಷಣೆ ಅಂದರೆ ನಿರ್ದೇಶಕ ರಾಜಮೌಳಿ.

ಡಿಸೆಂಬರ್ 21 ಕ್ಕೆ ವಿಶ್ವದಾದ್ಯಂತ ‘ಕೆ.ಜಿ.ಎಫ್’ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಅದ್ದೂರಿ ಸ್ವಾಗತ ಮಾಡಲು ಪ್ರೀ ರಿಲೀಸ್ ಈವೆಂಟ್ ಹೈದರಾಬಾದ್‍ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಅದ್ಬುತ ರಾಜಮೌಳಿ ಅತಿಥಿಯಾಗಿ ಬರಲಿದ್ದಾರೆ. ಈ ಮೂಲಕ ಕನ್ನಡದ ‘ಕೆ.ಜಿ.ಎಫ್’ ಚಿತ್ರವನ್ನ ತೆಲುಗು ನೆಲದಲ್ಲಿ ಪ್ರಚಾರ ಮಾಡಲಿದ್ದಾರೆ ರಾಜಮೌಳಿ.

ಅಂದಹಾಗೆ ‘ಕೆ.ಜಿ.ಎಫ್ ‘ತೆಲುಗು ಚಿತ್ರವನ್ನು ವರಾಹಿ ಫಿಲಂಸ್ ವಿತರಣೆ ಮಾಡುತ್ತಿದೆ. ಈ ಸಂಸ್ಥೆಗೆ ಟಾಲಿವುಡ್ ನೆಲದಲ್ಲಿ ತನ್ನದೇ ಆದ ಹೆಸರಿದೆ. ರಾಜಮೌಳಿಯ ಈಗ ಚಿತ್ರ ಇದೇ ಬ್ಯಾನರ್​ನಲ್ಲಿ ನಿರ್ಮಾಣವಾಗಿತ್ತು. ‘ಕೆ.ಜಿ.ಎಫ್’ ಚಿತ್ರವನ್ನ ಸಖತ್ತಾಗಿ ಪ್ರಮೋಟ್ ಮಾಡಿ, ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಯೋಜನೆ ವರಾಹಿ ಬ್ಯಾನರ್​ದು.

ಇದಕ್ಕಾಗಿ ಟಾಲಿವುಡ್‍ನ ಖ್ಯಾತನಾಮರ ಸಹಕಾರ ತೆಗೆದುಕೊಳ್ಳುತ್ತಿದ್ದು, ಕನ್ನಡದ ಡಬ್ಬಿಂಗ್ ಸಿನಿಮಾವೊಂದು ತೆಲುಗು ಸೀಮೆಯಲ್ಲಿ 500 ಸೆಂಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಕನ್ನಡದ ಅಣ್ತಮ್ಮ ತೆಲುಗು ನೆಲದಲ್ಲಿ ದೊಡ್ಡ ಸ್ಟಾರ್ ಆಗೋದು ಬಹುತೇಕ ಖಚಿತವಾದಂತಿದೆ.

Comments are closed.