ಮನೋರಂಜನೆ

ಸಸ್ಪೆನ್ಸ್ ಥ್ರಿಲ್ಲರ್ ‘ಅನುಕ್ತ’ ಆಡಿಯೋ ಬಿಡುಗಡೆಗೊಳಿಸಿದ ನಟ ದರ್ಶನ್ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ದೇಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಅನುಕ್ತ ಕನ್ನಡ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ‌ನೆರವೇರಿತು.

 

ಹೊಸಬರ ತಂಡವೊಂದು ಸೇರಿ ಮಾಡಿರುವ ‘ಅನುಕ್ತ’ ಚಿತ್ರದ ಆಡಿಯೋವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿ ತಮ್ಮ ಮನದಾಳದ ಮಾತನ್ನು ಮುಂದಿಟ್ಟರು.

ಚಿತ್ರದ ಟೀಸರ್ ಮತ್ತು ಹಾಡುಗಳನ್ನು ವೀಕ್ಷಿಸಿ ಪ್ರಶಂಸಿಸಿದರು. “ಅನುಕ್ತ ಎನ್ನುವ ಹೆಸರು ಕೇಳಿದರೆ ಸಂಸ್ಕೃತ ಪದದ ಹಾಗೆ ಅನಿಸಿತು. ಅದರ ಅರ್ಥ ಅನ್ ಟೋಲ್ಡ್ ಎಂದು ಇಲ್ಲಿ ಯಾರೋ‌ ಹೇಳಿದ್ರು. ಟೀಸರ್ ಚೆನ್ನಾಗಿದೆ ಎಂದರು.

ಕನ್ನಡದವರು ಎಲ್ಲ ಭಾಷೆಗಳ ಸಿನಿಮಾಗಳನ್ನೂ ನೋಡುತ್ತಾರೆ ಎಂದಿರುವ ಅವರು, ‘ಓರ್ವ ಸಾಮಾನ್ಯ ಕನ್ನಡ ಪ್ರೇಕ್ಷಕ ಪ್ರಯೋಗಾತ್ಮ ಸಿನಿಮಾ ನೋಡಬೇಕು ಎಂದರೆ ತಮಿಳು ಸಿನಿಮಾ ನೋಡುತ್ತಾನೆ. ಆ್ಯಕ್ಷನ್​ ಸಿನಿಮಾ ನೋಡಬೇಕು ಎಂದರೆ ತೆಲುಗು ಚಿತ್ರವನ್ನು, ಹೊರದೇಶಗಳ ಲೊಕೇಷನ್​ ಕಣ್ತುಂಬಿಕೊಳ್ಳಲು ಬಾಲಿವುಡ್​ ಸಿನಿಮಾ ನೋಡುತ್ತಾನೆ. ನೋಡಬೇಕಲ್ಲ ಎಂದು ಕನ್ನಡ ಸಿನಿಮಾ ನೋಡುತ್ತಾನೆ. ಇದು ನಮ್ಮ ಸ್ಥಿತಿ. ನಾವು ನಮ್ಮ ಭಾಷೆಯನ್ನು ಅವರಿಗೆ ಕಲಿಸುವುದಿಲ್ಲ. ಅವರ ಭಾಷೆಯಲ್ಲೇ ಮಾತನಾಡಿಬಿಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಟ್ರೆಂಡ್​ ಈಗ ಬದಲಾಗುತ್ತಿದೆ ಎಂದಿರುವ ದರ್ಶನ್​, ‘ಪರಭಾಷೆಗಳಿಗೆ ಹೋಲಿಸಿದರೆ ನಮ್ಮ ಭಾಷೆಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಕಡಿಮೆ. ಆದರೆ ಈಗ ಹೊಸ ಪ್ರತಿಭೆಗಳು ಈ ರೀತಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಪ್ಲಸ್​​ ಪಾಯಿಂಟ್​ ಆಗಲಿದೆ. ಈ ರೀತಿ ಸಿನಿಮಾಗಳು ಮತ್ತಷ್ಟು ತೆರೆಕಾಣುವಂತಾಗಲಿ’ ಎಂದು ಹಾರೈಸಿದರು.

ದೇಯಿ ಪ್ರೊಡಕ್ಷನ್ಸ್ ಲಾಂಛನದಡಿ ಹರೀಶ್ ಬಂಗೇರ ನಿರ್ಮಾಣದ ಚಿತ್ರ

ದೇಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಗೆ ಚಿತ್ರಕತೆ ಬರೆದು ನಿರ್ದೇಶಿಸಿದವರು ಅಶ್ವಥ್ ಸ್ಯಾಮ್ಯುಯೆಲ್. ನಿರ್ಮಾಪಕರು ಹರೀಶ್ ಬಂಗೇರ. ನಾಯಕ ಕಾರ್ತಿಕ್ ಅತ್ತಾವರ ಮತ್ತು ಸಂತೋಷ್ ಕುಮಾರ್ ಕೊಂಚಾಡಿ ಸೇರಿ ಕತೆ ಬರೆದಿದ್ದಾರೆ. ಬಿಡುಗಡೆಯಾದ ಆಡಿಯೋ ಗೀತೆಗೆ ಕಾರ್ತಿಕ್ ನೃತ್ಯ ಮಾಡಿ ರಂಜಿಸಿದರು.

ಸಿನೆಮಾದಲ್ಲಿ ಯಾರೆಲ್ಲ ಇದ್ದಾರೆ ನೋಡಿ…

ಚಿತ್ರಕ್ಕೆ ಕಿರಣ್ ಶೆಟ್ಟಿ ಮತ್ತು ನವೀನ್ ಶರ್ಮ ಸೇರಿ ಸಂಭಾಷಣೆ ರಚಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ‌ ಸಂಗೀತ ನೊಬಿನ್ ಪೌಲ್ ಅವರದ್ದು. ಮನೋಹರ್ ಜೋಷಿ ಛಾಯಾಗ್ರಾಹಕರು. ಒಟ್ಟು ಸಿನಿಮಾ ತಂಡದಲ್ಲಿ ಮಂಗಳೂರು ಕಡೆಯವರು ಹೆಚ್ಚಿದ್ದ ಕಾರಣ ಹುಲಿವೇಷಗಳ ಕುಣಿತದೊಂದಿಗೆ ದರ್ಶನ್ ಗೆ ಅದ್ದೂರಿ ಸ್ವಾಗತ ಕೋರಲಾಗಿತ್ತು. ಚಿತ್ರದ ಪ್ರಧಾನ ಪಾತ್ರಧಾರಿಗಳಾದ ಸಂಪತ್ ರಾಜ್, ಅನು‌ಪ್ರಭಾಕರ್ ಮುಖರ್ಜಿ ಸೇರಿದಂತೆ ಚಿತ್ರತಂಡದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.