ಮನೋರಂಜನೆ

ಕಷ್ಟದಲ್ಲಿರುವವರಿಗೆ ಸಹಾಯವಾಗಬೇಕಿದ್ದ ಮೀಟೂ ಅಭಿಯಾನ ಪಬ್ಲಿಸಿಟಿಗಾಗಿ ಬಳಕೆ: ಹರ್ಷಿಕಾ ಪೂಣಚ್ಛ

Pinterest LinkedIn Tumblr


ಹುಬ್ಬಳ್ಳಿ: ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯವಾಗಬೇಕಿದ್ದ ಮೀಟೂ ಅಭಿಯಾನವನ್ನು ಪಬ್ಲಿಸಿಟಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಛ ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮೀಟೂ ಅಭಿಯಾನ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನು ಹೇಳಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಆದರೆ ಇಂದು ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಈ ಅಭಿಯಾನ ಉತ್ತಮವಾಗಿದೆ. ಆದರೆ ಸುಮ್ಮ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಚಿತ್ರರಂಗದಲ್ಲಿ ಕಷ್ಟ ಪಟ್ಟು 10-12 ವರ್ಷಗಳ ಕಾಲ ಹೆಸರನ್ನು ಗಳಿಸಿರುತ್ತಾರೆ. ಆದರೆ ಈ ಮೀಟೂ ಆರೋಪದ ಮೂಲಕ ಒಂದೇ ನಿಮಿಷದಲ್ಲಿ ಅವರ ಬದುಕನ್ನು ನಾಶಮಾಡುತ್ತಾರೆಂದು ಹೇಳಿದರು.

ಅರ್ಜುನ್ ಸರ್ಜಾ ಮೇಲೆ ಹಾಗೂ ಶೃತಿ ಹರಿಹರನ್ ಮೀಟೂ ಆರೋಪ ಕುರಿತು ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನು ಸತ್ಯದ ಪರವಾಗಿದ್ದೇನೆ. ಸತ್ಯ ಯಾವ ಕಡೆ ಇರುತ್ತದೆಯೋ, ನಾನು ಆ ಕಡೆ ಇರುತ್ತೇನೆ. ಅನ್ಯಾಯಕ್ಕೊಳಗಾದವರು ಪೊಲೀಸ್ ಠಾಣೆ, ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನ್ಯಾಯಾಲಯಕ್ಕೆ ಹೋಗಬೇಕು. ಇವೆಲ್ಲವನ್ನೂ ಬಿಟ್ಟು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಇದನ್ನು ನೋಡಿದರೇ, ಪ್ರಚಾರಕ್ಕಲ್ಲದೇ ಮತ್ತೇನು ಎಂದು ಪ್ರಶ್ನಿಸುವ ಮೂಲಕ ನಟಿ ಶೃತಿ ಹರಿಹರನ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನನಗೂ ಸಹ ಮೀಟೂ ಅನುಭವ ಆಗಿತ್ತು. ಹೀಗಾಗಿ ನಾನು ಬಾಲಿವುಡ್ ಸಿನೆಮಾದಿಂದ ಅರ್ಧಕ್ಕೆ ವಾಪಾಸ್ಸು ಬಂದೆ. ಚಿತ್ರವನ್ನು ನಿರ್ಮಾಣ ಮಾಡಿ, ಬಿಡುಗಡೆಯಾಗಿ ಎಲ್ಲಾ ಮುಗಿದ ನಂತರ ಹೀಗೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಹಾಗೆನಾದರೂ ಆಗಿದ್ದರೇ, ಮೊದಲೇ ದೂರ ಉಳಿಯಬಹುದಿತ್ತು ಎಂದು ತಿಳಿಸಿದರು.

ಈಗಲೇ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನು ಒಳ್ಳೆಯ ಸಿನೆಮಾಗಳನ್ನು ಮಾಡಬೇಕೆಂಬ ಆಸೆ ಇದೆ. ಮದುವೆಯಾಗುವಾಗ ಎಲ್ಲರಿಗೂ ತಿಳಿಸಿ ಮದುವೆಯಾಗುತ್ತೇನೆ. ಯಾರಿಗೋ ಹೆದರಿಕೊಂಡು ರಿಜಿಸ್ಟ್ರಾರ್ ಮದುವೆಯಾಗಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಶೃತಿ ಹರಿಹರನ್ ಕಾಲೆಳೆದರು.

Comments are closed.