ಕ್ರೀಡೆ

 65 ಕಿಲೋ ವಿಭಾಗದಲ್ಲಿ ಬಜರಂಗ್ ಪೂನಿಯಾ ವಿಶ್ವದ ನಂಬರ್ ಒನ್ ಕುಸ್ತಿಪಟು

Pinterest LinkedIn Tumblr


ನವದೆಹಲಿ: ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದ ಜಯಿಸಿದ್ದ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು 65 ಕಿಲೋ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಎನಿಸಿದ್ದಾರೆ. ಯುಡಬ್ಲ್ಯೂಡಬ್ಲ್ಯೂ ಸಂಸ್ಥೆಯ ಪಟ್ಟಿಯಲ್ಲಿ ಒಟ್ಟು 96 ಅಂಕಗಳೊಂದಿಗೆ ಬಜರಂಗ್ ಪೂನಿಯಾ ಅಗ್ರಸ್ಥಾನ ಪಡೆದಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಚಿನ್ನದ ಪದಕಗಳು, ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಹೀಗೆ ಈ ಸೀಸನ್​ನಲ್ಲಿ ಅವರು 5 ಪದಕ ಗಳಿಸಿದ್ದು ಅವರ ರ್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ.

“ಪ್ರತಿಯೊಬ್ಬ ಅಥ್ಲೀಟ್ ಕೂಡ ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯಾದರೂ ನಂಬರ್ ಒನ್ ಸ್ಥಾನಕ್ಕೆ ಹೋಗಬೇಕೆಂದು ಬಯಸುತ್ತಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದು ನಂಬರ್ ಒನ್ ಪಟ್ಟ ಸಿಕ್ಕಿದ್ದರೆ ಇನ್ನೂ ಖುಷಿಯಾಗಿರುತ್ತಿತ್ತು,” ಎಂದು ಬಜರಂಗ್ ಪೂನಿಯಾ ಪ್ರತಿಕ್ರಿಯಿಸಿದ್ದಾರೆ.

ಬುಡಾಪೆಸ್ಟ್ ನಗರದಲ್ಲಿ ಅಕ್ಟೋಬರ್ 3ನೇ ವಾರದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಬಜರಂಗ್ ಅವರಿಗೆ ಟೂರ್ನಿಯಲ್ಲಿ ಸೀಡಿಂಗ್ ನೀಡಲಾಗಿತ್ತು. ಈ ರೀತಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸೀಡಿಂಗ್ ಪಡೆದ ಮೊತ್ತಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಆದರೆ, ಆ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ವರೆಗೂ ತಲುಪಿದ ಬಜರಂಗ್ ಅವರು ಅಂತಿಮ ಘಟ್ಟದಲ್ಲಿ ಜಪಾನ್​ನ ಟಕುಟೋ ಒಟೋಗುರೋ ವಿರುದ್ಧ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿದ್ದರು.

2013ರಲ್ಲಿ ಇದೇ ಬುಡಾಪೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆಗ 19 ವರ್ಷದ ಹದಿಹರೆಯದವರಾಗಿದ್ದ ಬಜರಂಗ್ ಅವರು ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಅವರು ಚಿನ್ನದ ಪದಕ ಜಯಿಸುವ ನಿರೀಕ್ಷೆ ಇತ್ತು. ಆದರೆ, ಕೊನೆಯ ಸುತ್ತಿನಲ್ಲಿ ಅವಕಾಶ ಕೈತಪ್ಪಿತು.

65 ಕಿಲೋ ವಿಭಾಗದಲ್ಲಿ ಬಜರಂಗ್ ಪೂನಿಯಾ ನಂತರದ 2ನೇ ಸ್ಥಾನದಲ್ಲಿ ಕ್ಯೂಬಾದ ಅಲೆಜಾಂಡ್ರೋ ಎನ್ರಿಕೆ ಲಾಡೆಸ್ ತೋಬಿಯೆರ್ ಅವರಿದ್ದಾರೆ. ಆದರೆ, 96 ಅಂಕ ಹೊಂದಿರುವ ಬಜರಂಗ್ ಪೂನಿಯಾ ಅವರು ತೋಬಿಯೆರ್​ಗಿಂತ 30 ಅಂಕ ಹೆಚ್ಚು ಹೊಂದಿದ್ಧಾರೆ. ಬುಡಾಪೆಸ್ಟ್​ನಲ್ಲಿ ಬಜರಂಗಿಯನ್ನು ಸೋಲಿಸಿದ್ದ ಜಪಾನ್ ಕುಸ್ತಿಪಟು 56 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪುರುಷರ ವ್ರೆಸ್ಲಿಂಗ್ ಕ್ಷೇತ್ರದಲ್ಲಿ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾವುದೇ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎಂಬ ದಾಖಲೆಯೂ ಬಜರಂಗಿಯದ್ದಾಗಿದೆ. ಆದರೆ, ಮಹಿಳೆಯರ ವಿಭಾಗದಲ್ಲಿ ಐವರು ಭಾರತೀಯರು ಟಾಪ್-10 ಪಟ್ಟಿಗಳಲ್ಲಿದ್ದಾರೆ. ಪೂಜಾ ಧಂಡ, ರಿತು ಪೋಗಾಟ್, ಸರಿತಾ ಮೋರ್, ನವಜೋತ್ ಕೌರ್ ಮತ್ತು ಕಿರಣ್ ಅವರು ಅಗ್ರ 10ರ ಪಟ್ಟಿಗಳಲ್ಲಿ ಸ್ಥಾನ ಪಡೆದಿದ್ದಾರೆ.

Comments are closed.