ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್ ಮತ್ತು ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆಯನ್ನು ರಹಸ್ಯ ಸ್ಥಳದಲ್ಲಿ ಪೊಲೀಸರು ವಿಡಿಯೋ ಮಾಡಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಹಾಗೂ ಪಿಎಸ್‍ಐ ರೇಣುಕಾ ಸಮ್ಮುಖದಲ್ಲಿ ಸಾಕ್ಷಿಗಳ ಈ ಹೇಳಿಕೆ ದಾಖಲು ಮಾಡಿದ್ದಾರೆ. ಇಬ್ಬರು ಪೊಲೀಸರ ಮುಂದೆ ಹೇಳಿದ್ದು ಏನು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕಿರಣ್ ಹೇಳಿದ್ದು ಏನು?
ಶೃತಿ ಹರಿಹರನ್ ಗೆ ಅರ್ಜುನ್ ಸರ್ಜಾ ಅವರಿಂದ ಕಿರುಕುಳ ಆಗಿದ್ದು ನಿಜ. ರಿಹರ್ಸಲ್ ವೇಳೆಯೂ ಶೃತಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ನಾವು ದೇವನಹಳ್ಳಿಯಿಂದ ಹೊರಟಾಗ ಸಿಗ್ನಲ್ ಬಳಿ ಅರ್ಜುನ್ ಸರ್ಜಾ ಮತ್ತೊಂದು ಕಾರಿನಲ್ಲಿ ಎದುರಾದರು. ಆಗ ನಾನು ಶೃತಿ ಹರಿಹರನ್ ಪಕ್ಕದಲ್ಲಿಯೇ ಕುಳಿತ್ತಿದ್ದೆ. ಶೃತಿ ಹರಿಹರನ್ ಅವರನ್ನು ಅರ್ಜುನ್ ಸರ್ಜಾರ ಊಟಕ್ಕೆ ಕರೆದರು. ಅಷ್ಟೇ ಅಲ್ಲದೇ ರೆಸಾರ್ಟ್ ಗೆ ಹೋಗೋಣ ಬಾ ಎಂದಿದ್ದರು. ಈ ಸಂದರ್ಭದಲ್ಲಿ ಸರ್ಜಾ ಜೊತೆ ಊಟಕ್ಕೆ ಹೋಗಲು ಶೃತಿ ಹರಿಹರನ್ ನಿರಾಕರಿಸಿ ಕಣ್ಣಿರು ಹಾಕಿದರು. ಇದಕ್ಕೆ ನಾನೇ ಸಾಕ್ಷಿ, ನಾನು ಆಗ ಅವರ ಪಕ್ಕದಲ್ಲೇ ಕುಳಿತಿದ್ದೆ. ನಂತರ ಅರ್ಜುನ್ ಸರ್ಜಾ ಹೊರಟರು.
ಮೋನಿಕಾ ಹೇಳಿದ್ದು ಏನು?
ನನಗೇನು ಗೊತ್ತಿಲ್ಲ, ನನಗೆ ಏನೂ ನೆನಪಾಗುತ್ತಿಲ್ಲ. ವಿಸ್ಮಯ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಏನಾಯ್ತು ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ. ಲೈಂಗಿಕ ಕಿರುಕುಳ ಬಗ್ಗೆ ನನಗೇನೂ ಗೊತ್ತಿಲ್ಲ, ಶೃತಿಯೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆ ನೀಡಿದ್ದಾರೆ.
ಶೃತಿ ಹರಿಹರನ್ ಅವರ ಆಪ್ತ ಸಹಾಯಕ ಬೋರೇಗೌಡ ಮತ್ತು ವಿಸ್ಮಯ ಚಿತ್ರದ ಮತ್ತೊಬ್ಬ ಸಹ ನಿರ್ದೇಶಕ ಭರತ್ ನೀಲಕಂಠ ಅವರು ಬುಧವಾರ ಪೊಲೀಸರ ಮುಂದೆ ಹೇಳಿಕೆ ನೀಡುವ ಸಾಧ್ಯತೆಗಳಿವೆ.
ಶುಕ್ರವಾರಕ್ಕೆ ಮುಂದೂಡಿಕೆ:
ಅರ್ಜುನ್ ಸರ್ಜಾ ಹೂಡಿದ್ದ ಮಾನನಷ್ಟ ಕೇಸ್ ವಿಚಾರಣೆಯನ್ನು ನವೆಂಬರ್ 2ಕ್ಕೆ ಮೇಯೋ ಹಾಲ್ ಕೋರ್ಟ್ ಮುಂದೂಡಿದೆ. ನಿನ್ನೆಯಷ್ಟೇ ಶೃತಿಹರನ್ ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಲು ಸಮಯ ಬೇಕು ಎಂದು ಸರ್ಜಾ ಪರ ವಕೀಲರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಧೀಶರು ವಿಚಾರಣೆಯನ್ನ ಶುಕ್ರವಾರಕ್ಕೆ ಮುಂದೂಡಿದ್ದಾರೆ.
Comments are closed.