*ಹರೀಶ್ ಬಸವರಾಜ್

ಕಣ್ಣಿಗೆ ಹಬ್ಬ ಎನಿಸುವ ಛಾಯಾಗ್ರಹಣ, ಕಿವಿಗೆ ಇಂಪಾಗಿ ಕೇಳುವ ಹಾಡುಗಳು, ಕಚಗುಳಿ ಇಡುವ ಹಾಸ್ಯ, ಸ್ಮಾರ್ಟ್ ಆಗಿ ಕಾಣುವ ಹೀರೋ ಇವೆಲ್ಲೂ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದ ಪ್ಲಸ್ ಪಾಯಿಂಟ್‌ಗಳು. ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಟೈಟಲ್ ಕೇಳಿದಾಕ್ಷಣ ಇದು ಕನ್ನಡದ ಹೋರಾಟಕ್ಕೆ ಸಂಬಂಧಿಸಿದ ಚಿತ್ರವೆಂದುಕೊಂಡರೆ ಅದು ನಿಮ್ಮ ತಪ್ಪು, ಇದೊಂದು ಪ್ಯೂರ್ ಲವ್‌ಸ್ಟೋರಿ.
ನಾಯಕ ಅವಿನಾಶ್ (ಅವಿನಾಶ್) ತನ್ನ ಕಥೆಯನ್ನು ಹೇಳುವ ಮೂಲಕ ಸಿನಿಮಾ ಆರಂಭವಾಗುತ್ತದೆ. ಆದರೆ ಆತ ಸಿನಿಮಾ ಪೂರ್ತಿ ತನ್ನ ಕಥೆಯನ್ನು ಹೇಳುವುದಿಲ್ಲ, ಬದಲಿಗೆ ತನ್ನ ದಾರಿಯಲಿಲ ತನ್ನ ಸ್ನೇಹಿತ ಘರ್ಜನೆ ಚಂದ್ರ (ಚಿಕ್ಕಣ್ಣ) ಸಿಕ್ಕಾಗ ತನ್ನ ಕಥೆಯನ್ನು ಮತ್ತು ಪ್ರೀತಿಯ ವ್ಯಥೆಯನ್ನು ಹೇಳುತ್ತಾನೆ. ಇದಾದ ಮೇಲೆ ಘರ್ಜನೆ ಚಂದ್ರ ಕೂಡಾ ತನ್ನ ಕಥೆ ಹೇಳುತ್ತಾನೆ, ಇವರಿಬ್ಬರ ಕಥೆ ನಡುವೆ ಪ್ರೇಕ್ಷಕ ಸಿಲುಕಿ ಅಲ್ಲಲ್ಲಿ ಸ್ವಲ್ಪ ಒದ್ದಾಡುತ್ತಾನೆ. ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕುಶಾಲ್ ಮೇಕಿಂಗ್ ವಿಚಾರದಲ್ಲಿ ಗೆದ್ದಿದ್ದಾರೆ. ಆದರೆ ಕಥೆಯನ್ನು ಕಟ್ಟುವಲ್ಲಿ ಎಡವಿದ್ದಾರೆ. ಹಾಗಂತ ಸಿನಿಮಾ ಏನೂ ತೀರಾ ಫೇಲವ ಅನಿಸುವುದಿಲ್ಲ, ಇಬ್ಬರು ನಾಯಕರು, ಎರಡು ಪ್ರೇಮಕಥೆ, ಎರಡೆರೆಡು ಫ್ಲಾಶ್‌ಬ್ಯಾಕ್, ಹೀಗೆ ನೀವು ಒಂದನ್ನು ನಿರೀಕ್ಷೆ ಮಾಡಿ ಹೋದಾಗ ಎರೆಡೆರೆಡು ಸಿಗುತ್ತದೆ.
ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಟೈಟಲ್ ಗಮನ ಸೆಳೆಯುವ ಶೀರ್ಷಿಕೆ, ಇದೊಂಥಾರ ಅದ್ಧೂರಿ ಆಮಂತ್ರಣ ಪತ್ರಿಕೆ ನೀಡಿ, ಸಾದಾರಣ ಕಾರ್ಯಕ್ರಮ ನೋಡಿದಂತೆ ಭಾಸವಾಗುತ್ತದೆ. ದ್ವೀತಿಯಾರ್ಧದಲ್ಲಿ ಬರುವ ಕೆಲ ದೃಶ್ಯಗಳನ್ನು ಸಹಿಸಿಕೊಳ್ಳುವುದು ಕಷ್ಟ. ಸಿನಿಮಾವನ್ನು ಸಿನಿಮಾದ ರೀತಿಯಲ್ಲಿ ನೋಡಬೇಕು ಎಂಬ ಫಾರ್ಮುಲಾ ಇಟ್ಟುಕೊಂಡರು, ಒಬ್ಬ ಹೈಸ್ಕೂಲ್ ವಿದ್ಯಾರ್ಥಿ ಅಷ್ಟೊಂದು ಅವಾಂತರಗಳನ್ನು ಸೃಷ್ಟಿಸಬಲ್ಲನೇ ಎಂಬ ಪ್ರಶ್ನೆಯಂತೂ ಕಾಡುತ್ತದೆ.
ನಿರ್ದೇಶಕ ಕುಶಾಲ್ ಅವರ ಶ್ರಮ ಇಡೀ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಪ್ರತಿ ದೃಶ್ಯವನ್ನು ಅವರು ಸುಂದರವಾಗಿ ಕಟ್ಟಿಕೊಟ್ಟು, ಕನ್ನಡಕ್ಕೆ ಒಬ್ಬ ಒಳ್ಳೆ ಮೇಕರ್ ಸಿಕ್ಕಿದ್ದಾರೆ ಅನ್ನಿಸುತ್ತಾರೆ. ಮೇಕಿಂಗ್‌ನಲ್ಲಿ ಕಾಣುವ ಅವರ ಕುಶಲತೆ, ಕಥೆಯಲ್ಲಿ ಮಿಸ್ ಹೊಡೆಯುತ್ತದೆ. ಸಂಭಾಷಣೆಯಲ್ಲಿಯೂ ಕಚಗುಳಿ ಇಟ್ಟು ನಗಿಸುತ್ತಾರೆ.
ಅವಿನಾಶ್ ಶಠಮರ್ಷಣ ತಮ್ಮ ನೈಜ ನಟನೆಯಿಂದ ನೋಡುಗರನ್ನು ಆವರಿಸಿಕೊಳ್ಳುತ್ತಾರೆ. ತಮ್ಮ ಮುಗ್ಧ ನಗು ಮತ್ತು ಉದ್ದದ ಗಡ್ಡ, ತಲೆ ತುಂಬಾ ಕೂದಲಿನಿಂದ ಹುಡುಗಿಯರ ಮನವನ್ನು ಕದಿಯಲು ಪ್ರಯತ್ನ ಪಡುತ್ತಾರೆ. ಚಿಕ್ಕಣ್ಣನ ನಟನೆಯಂತೂ ಫುಲ್ ನಗಿಸುತ್ತದೆ. ನಾಯಕಿ ಕೃಷಿ ತಾಪಂಡ ಕೂಡಾ ಸುಂದರವಾಗಿ ತಮಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಸಿನಿಮಾಟೋಗ್ರಫರ್ ರಿಷಿಕೇಶ್ ಕನ್ನಡದ ಸುಂದರ ತಾಣಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಉದ್ದವಾದ ದೃಶ್ಯಗಳಿಂದ ಸಂಕಲನಕಾರರು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎಲ್ಲ ಚೆನ್ನಾಗಿವೆ. ಪ್ರತಿ ದೃಶ್ಯವನ್ನು ಶ್ರೀಮಂತಿಕೆಯಿಂದ ತೋರಿಸಲು ನಿರ್ದೇಶಕರ ತಂಡಕ್ಕೆ ಬೆನ್ನೆಲುಬಾಗಿ ನಿಂತು ಬಂಡವಾಳ ಹೂಡಿರುವ ಒಂಭತ್ತಕ್ಕೂ ಹೆಚ್ಚು ಜನ ಯುವ ನಿರ್ಮಾಪಕರ ಶ್ರಮವನ್ನು ಮೆಚ್ಚಿಕೊಳ್ಳಲೇಬೇಕು. ಉಳಿದಂತೆ ರಂಗಾಯಣ ರಘು, ಸುಚೇಂದ್ರಪ್ರಸಾದ್, ಕಿಂಗ್ ಮೋಹನ್, ದತ್ತಣ್ಣ, ನಾಗರಾಜುಮೂರ್ತಿ, ಚೇತನ್‌ದುರ್ಗ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಕನ್ನಡದವರೇ ನಿರ್ಮಾಣ ಮಾಡಿ, ಕನ್ನಡದವರೇ ನಿರ್ದೇಶನ ಮಾಡಿ, ಅಚ್ಚ ಕನ್ನಡಿಗರೇ ನಟಿಸಿರುವ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದು.
Comments are closed.