ಅಂತರಾಷ್ಟ್ರೀಯ

ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು

Pinterest LinkedIn Tumblr


ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ಕೋರ್ಟ್​ ಆದೇಶಿಸಿದೆ. ನವಾಜ್​ ಷರೀಫ್​ ಪುತ್ರಿ ಮರಿಯಮ್​ಗೆ 7 ವರ್ಷಗಳ ಶಿಕ್ಷೆಯನ್ನೂ ಸಹ ಕೋರ್ಟ್​ ವಿಧಿಸಿದೆ. ಈ ಮೂಲಕ ಪನಾಮ ಪೇಪರ್​ನಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಮಾಜಿ ಪ್ರಧಾನಿ ಮತ್ತು ಪುತ್ರಿ ಅಪರಾಧಿಗಳೆಂದು ಕೋರ್ಟ್​ ಅಧಿಕೃತ ಷರಾ ಬರೆದಿದೆ.

ಪಾಕಿಸ್ತಾನದ ಹೊಣೆಗಾರಿಕಾ ನ್ಯಾಯಾಲಯದ ನ್ಯಾಯಾಧೀಶ ಮೊಹಮ್ಮದ್​ ಬಶೀರ್​ ಈ ಮಹತ್ವದ ತೀರ್ಪನ್ನು ನೀಡಿದ್ದಾರೆ. ನವಾಜ್​ ಷರೀಫ್​ಗೆ 10 ವರ್ಷ, ಮರಿಯಮ್​ಗೆ 7 ವರ್ಷ ಹಾಗೂ ಷರೀಫ್​ ಅಳಿಯ ಸಫ್ದಾರ್​ಗೆ 1 ವರ್ಷ ಶಿಕ್ಷೆಯನ್ನು ವಿಧಿಸಿರುವ ನ್ಯಾಯಾಲಯ 8 ಮಿಲಿಯನ್​ ಪೌಂಡ್ಸ್​ ದಂಡವನ್ನೂ ವಿಧಿಸಿದೆ.

ಭ್ರಷ್ಟಾಚಾರದ ಆರೋಪವನ್ನು ಒಪ್ಪದ ಷರೀಫ್​ ಬುಧವಾರ ನ್ಯಾಯಾಲಯಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಪ್ರಕರಣದ ತೀರ್ಪನ್ನು ನಿಧಾನವಾಗಿ ನೀಡುವಂತೆ ಷರೀಫ್​ ಮನವಿ ಮಾಡಿದ್ದರು. ಷರೀಫ್​ ಸದ್ಯ ಲಂಡನ್​ನಲ್ಲಿದ್ದು, ಪತ್ನಿಯ ಕ್ಯಾನ್ಸರ್​ ಟ್ರೀಟ್​ಮೆಂಟ್​ ನಡೆಯುತ್ತಿರುವುದರಿಂದ ನ್ಯಾಯದಾನವನ್ನು ನಿಧಾನ ಮಾಡಬೇಕು ಎಂದು ಕೋರಿದ್ದರು.

ಪನಾಮ ಪೇಪರ್​ನಲ್ಲಿ ನವಾಜ್​ ಷರೀಫ್​ ಮತ್ತು ಪುತ್ರಿ ಮರಿಯಮ್​ ಹೆಸರಿನಲ್ಲಿ ಲಂಡನ್​ನಲ್ಲಿ ವಿಲಾಸೀ ಬಂಗಲೆಗಳು ಮತ್ತು ಆಸ್ತಿಗಳಿರುವ ಬಗ್ಗೆ ಉಲ್ಲೇಖಿಸಲಾಗಿತ್ತ. ಜತೆಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳೂ ಪನಾಮ ಪೇಪರ್​ನಲ್ಲಿ ಇದ್ದವು. ಯಾವಾಗ ಷರೀಫ್​ ವಿರುದ್ಧ ಬಹುಕೋಟಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ನವಾಜ್​ ಷರೀಫ್​ ವಿರುದ್ಧ ಪಾಕಿಸ್ತಾನದ ಜನತೆ ದಂಗೆಯೆದ್ದಿದ್ದರು. ಇಡೀ ಪಾಕಿಸ್ತಾನದ ತುಂಬಾ ಷರೀಫ್​ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಜುಲೈ 2017ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್​ ನವಾಜ್​ ಷರೀಫ್​ರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸುವ ಮೂಲಕ ಐತಿಹಾಸಿಕ ನಿರ್ಣಯ ತೆಗೆದುಕೊಂಡಿತ್ತು. ಇದೇ ಜುಲೈ 25ರಂದು ಪಾಕಿಸ್ತಾನದ ಚುನಾವಣೆ ನಡೆಯಲಿದ್ದು, ಷರೀಫ್​ ಪುತ್ರಿ ಮರಿಯಮ್​ ನವಾಜ್​ ಚುನಾವಣಾ ಅಭ್ಯರ್ಥಿಯಾಗಿದ್ದರು. ಆದರೆ ಅಪರಾಧಿ ಎಂದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಮರಿಯಮ್​ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ವಿಚಾರಣೆಯ ವೇಳೆ ಲಂಡನ್​ನಲ್ಲಿ ಷರೀಫ್​ ಖರೀದಿಸಿರುವ ಬಂಗಲೆಗಳ ಬಗ್ಗೆ ಕೋರ್ಟ್​ ಪ್ರಶ್ನಿಸಿತ್ತು. ಆದರೆ ಬಂಗಲೆಗಳನ್ನು ಅಧಿಕೃತ ಆದಾಯದಿಂದಲೇ ಕೊಂಡಿರುವುದಾಗಿ ಷರೀಫ್​ ವಾದಿಸಿದ್ದರು. ಆದರೆ ಅಧಿಕೃತ ಆದಾಯ ಮೂಲಗಳನ್ನು ಮತ್ತು ಅಧಿಕೃತ ಖರೀದಿ ಪತ್ರಗಳನ್ನು ನೀಡುವಲ್ಲಿ ಷರೀಫ್​ ಕುಟುಂಬ ವಿಫಲವಾಗಿತ್ತು. ಹಲವು ದಿನಗಳ ವಾದ ಮತ್ತು ಪ್ರತಿ ವಾದಗಳನ್ನು ಆಲಿಸಿದ ಹೊಣೆಗಾರಿಕೆ ನ್ಯಾಯಾಲಯ ಷರೀಫ್​ ರಾಜಕೀಯ ಭವಿಷ್ಯಕ್ಕೆ ಅಂತಿಮ ಚುಕ್ಕೆ ಇಟ್ಟಿದೆ. ಜತೆಗೆ ಷರೀಫ್​ ಪುತ್ರಿಯ ರಾಜಕೀಯ ರಂಗ ಪ್ರವೇಶಕ್ಕೂ ತಡೆಗೋಡೆಯೊಡ್ಡಿದೆ.

Comments are closed.