ಮನೋರಂಜನೆ

ಮಕ್ಕಳ ಕಳ್ಳರ ವದಂತಿಯಿಂದ ‘ದಂಡೂಪಾಳ್ಯಂ 4’ ಚಿತ್ರ ತಂಡಕ್ಕೂ ಎದುರಾದ ಭೀತಿ !

Pinterest LinkedIn Tumblr

ಪಾವಗಡ: ‘ದಂಡೂಪಾಳ್ಯಂ 4’ ಚಿತ್ರ ತಂಡಕ್ಕೆ ಮಕ್ಕಳ ಕಳ್ಳರ ವದಂತಿ ಬಿಸಿ ಮುಟ್ಟಿದೆ.

ತಾಲ್ಲೂಕಿನ ಪಳವಳ್ಳಿ ಸೇರಿದಂತೆ ಹಲವೆಡೆ 10 ದಿನಗಳ ಕಾಲ ತಂಡ ಚಿತ್ರೀಕರಣ ನಡೆಸುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ಕಥೆ ಆಧಾರಿತ ಚಲನ ಚಿತ್ರ ಆಗಿರುವುದರಿಂದ ನಟಿ ಸುಮನ್ ರಂಗನಾಥ್, ಇತರೆ ಕಲಾವಿದರು ಕೊಲೆಗಡುಕರು, ಕಳ್ಳರನ್ನು ಹೋಲುವ ಮೇಕಪ್ ಮಾಡಿಕೊಂಡು ಚಿತ್ರೀಕರಣದಲ್ಲಿ ತೊಡಗಿದ್ದಾಗ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಅನುಮಾನಿಸಿ ಪ್ರಶ್ನಿಸಿದ್ದಾರೆ. ‘ಯಾರು ನೀವು? ಇಲ್ಲಿಗೇಕೆ ಬಂದಿದ್ದೀರಾ? ಮಕ್ಕಳ ಕಳ್ಳರಾ?’ ಎಂಬಿತ್ಯಾದಿಯಾಗಿ ವಿಚಾರಿಸಿದ್ದಾರೆ ಎಂದು ಸ್ವತಃ ನಟಿ ಸುಮನ್ ರಂಗನಾಥ್ ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅನುಭವ ಹಂಚಿಕೊಂಡರು.

ತಂಡದ ಜೊತೆಯಲ್ಲಿದ್ದ ಸ್ಥಳೀಯರು ಚಿತ್ರ ತಂಡ, ಹಾಗೂ ನಟರ ಪರಿಚಯ ಮಾಡಿಕೊಟ್ಟ ನಂತರ ಗ್ರಾಮಸ್ಥರು ಒಬ್ಬರ ನಂತರ ನಟರ ಜೊತೆ ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ.

‘ಒಬ್ಬೊಬ್ಬರೇ ಸೆಟ್ ಬಿಟ್ಟು ಹೊರ ಹೋಗಬೇಡಿ, ಮಕ್ಕಳ ಕಳ್ಳರ ವದಂತಿ ಹಬ್ಬಿರುವುದರಿಂದ ನಿಮ್ಮ ಗೆಟಪ್ ನೋಡಿ ಮಕ್ಕಳ ಕಳ್ಳರು ಸಿಕ್ಕಿದ್ದಾರೆ ಎಂದು ಜನತೆ ಕಟ್ಟಿ ಹಾಕಿಯಾರು’ ಎಂದು ನಟಿ ಸುಮನ್ ರಂಗನಾಥ್ ಕಲಾವಿದರಿಗೆ ಎಚ್ಚರಿಕೆ ನೀಡಿದರು.

Comments are closed.