ಮನೋರಂಜನೆ

ನಿರ್ಮಾಪಕ ಹರೀಶ್ ಶೇರಿಗಾರ್’ರಲ್ಲಿ ಶಂಕರ್ ನಾಗ್’ನನ್ನು ಕಂಡ ಅನಂತ್ ನಾಗ್ ! ಮೇ 25 ರಂದು ಬಿಡುಗಡೆಯಾಗಲಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ

Pinterest LinkedIn Tumblr

ಬೆಂಗಳೂರು: ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ನಿರ್ಮಾಪಕರಾಗಿರುವ ದುಬೈಯ ಖ್ಯಾತ ಉದ್ಯಮಿ, ಗಾಯಕರಾಗಿರುವ ಹರೀಶ್ ಶೇರಿಗಾರ್ ಅವರು ತನ್ನ ಸ್ವಂತ ತಮ್ಮನಿದ್ದಂತೆ. ಶೇರಿಗಾರ್’ರಲ್ಲಿ ತಾನು ತನ್ನ ತಮ್ಮ ಶಂಕರ್ ನಾಗ್’ನನ್ನು ಕಾಣುತ್ತಿದ್ದೇನೆ ಎಂದು ಕನ್ನಡ ಚಿತ್ರ ರಂಗದ ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಮೇ 25 ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅನಂತ್ ನಾಗ್ ಮಾತನಾಡುತ್ತಿದ್ದರು.

ಮಾರ್ಚ್ 22 ಸಿನೆಮಾದಲ್ಲಿ ನಟಿಸುತ್ತಿದ್ದ ವೇಳೆ ಅದರ ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಪರಿಚಯವಾಗಿ, ಅದು ಒಳ್ಳೆಯ ಸ್ನೇಹಕ್ಕೆ ತಿರುಗಿತು. ಶೇರಿಗಾರ್ ಅವರ ನಡೆ-ನುಡಿ ತನಗೆ ಹಿಡಿಸಿದ್ದು, ಅವರೊಬ್ಬರು ತನ್ನ ಕುಟುಂಬದ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ಹೇಳಿದರು.

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ನಿರ್ಮಾಣದ ವೇಳೆ ಹಣಕಾಸಿನ ತೊಂದರೆಯಾದಾಗ ನನಗೆ ನೆನಪಿಗೆ ಬಂದಿದ್ದು ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್. ಅವರನ್ನು ಈ ಸಿನೆಮಾಕ್ಕೆ ನಾನೇ ಕರೆದುಕೊಂಡು ಬಂದೆ ಎಂದರು.

ಮಾರ್ಚ್ -22 ಸಿನೆಮಾ ಮಾಡಿದ್ದ ಹರೀಶ್ ಶೇರಿಗಾರ್, ಅವರ ಸಿನೆಮಾದಲ್ಲಿ ನಾನೊಂದು ಮುಖ್ಯ ಪಾತ್ರವಹಿಸಿದ್ದೆ. ಆಗಿಂದ ನನಗೆ ಹರೀಶ್ ಶೇರಿಗಾರ್ ಪರಿಚಿತ. ಮಂಗಳೂರಿನವರಾದ ಅವರು ದುಬೈಯಲ್ಲಿ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರೂ ಆಗಿದ್ದು, ಸಾಂಸ್ಕೃತಿಕ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮಾರ್ಚ್ 22 ಸಿನೆಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅವರ ಮನೆಯಲ್ಲಿಯೇ ನಾನು ವಾಸ್ತವ್ಯ ಹೂಡಿದ್ದೆ. ಆಗ ನಮ್ಮ ಪರಿಚಯ ಸ್ನೇಹವಾಗಿ ಬೆಳೆಯಿತು. ಮುಂದೆ ನಾವು ಒಳ್ಳೆಯ ಸ್ನೇಹಿತರಾದೆವು.

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನೆಮಾ ಆರ್ಥಿಕವಾಗಿ ಸಂಕಷ್ಟ ಎದುರಾದಾಗ ತಾನು ಹರೀಶ್ ಶೇರಿಗಾರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ಆಗ ಅವರು ಹಿಂದೂ ಮುಂದು ನೋಡದೆ ನನ್ನ ಒಂದೇ ಮಾತಿಗೆ ನಿರ್ಮಾಣದಲ್ಲಿ ಕೈಜೋಡಿಸುವುದಾಗಿ ಹೇಳಿ ಮುಂದೆ ಬಂದರು.

ಹರೀಶ್ ಶೇರಿಗಾರ್ ಕುಟುಂಬದೊಂದಿಗೆ ನಮ್ಮ ಕುಟುಂಬದ ಸ್ನೇಹವು ಹೀಗೆಯೇ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದರು.

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ದುಬೈ ಚಿತ್ರೀಕರಣದ ಎಲ್ಲ ಜವಾಬ್ದಾರಿ, ಹಣಕಾಸಿನ ವ್ಯವಸ್ಥೆಯನ್ನೆಲ್ಲ ಹರೀಶ್ ಶೇರಿಗಾರ್ ಅವರೇ ಮಾಡಿದ್ದು, ಚಿತ್ರೀಕರಣದ ವೇಳೆ 10 ದಿನಗಳ ಕಾಲ ಅವರ ಮನೆಯಲ್ಲಿಯೇ ತಾನು ಉಳಿದುಕೊಂಡಿದ್ದೆ. ಅವರ ಅತಿಥಿ ಸತ್ಕಾರವನ್ನು ನಾನೆಂದೂ ಮರೆಯಲ್ಲ ಎಂದು ಅನಂತ್ ನಾಗ್ ಹರೀಶ್ ಶೇರಿಗಾರ್ ಬಗ್ಗೆ ಗುಣಗಾನ ಮಾಡಿದರು.

ಸಿನೆಮಾದ ನಿರ್ದೇಶಕ ನರೇಂದ್ರಬಾಬು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಂತ್ ನಾಗ್, ಅವರ ಸಂಭಾಷಣೆ, ಬರಹ ನೋಡಿ ತುಂಬಾನೇ ಖುಷಿ ಆಯಿತು. ಅವರ ನಿರ್ದೇಶನ ಕೂಡ ನನಗೆ ಬಹಳಷ್ಟು ಇಷ್ಟ ಆಯಿತು. ಅವರು ಅಂದುಕೊಂಡಂತೆ ಸಿನೆಮಾ ಮಾಡಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಸಿನೆಮಾಕ್ಕೆ ಟೈಟಲ್‌ ಕೊಟ್ಟದ್ದು ಅನಂತ್‌ನಾಗ್‌

ನರೇಂದ್ರಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ ಟೈಟಲ್‌ ನೀಡಿದ್ದು ಅನಂತ್‌ನಾಗ್‌ ಎನ್ನುವುದು ವಿಶೇಷ. ಸಿನಿಮಾದ ಸ್ಕ್ರಿಪ್ಟ್‌ ಜತೆಗೆ ಹಲವು ಹಂತಗಳಲ್ಲಿ ಇವರು ಸಿನಿಮಾಗಾಗಿ ಮುತುವರ್ಜಿ ತಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ಸಿನಿಮಾದ ಸ್ಟೋರಿ.

ಈ ಸಿನೆಮಾವನ್ನು ಕಲರ್ಸ್‌ಆಫ್ ಆನೇಕಲ್‌ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗು ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿದೆ.

ಈ ಸಿನಿಮಾ ಚಿತ್ರದ ಕಥೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಕಾರಣದಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದೆ. ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ಕಬ್ಬಡ್ಡಿ, ಸಂತೆಯಲ್ಲಿ ನಿಂತ ಕಬೀರ ಸೇರಿದಂತೆ ಹೊಸಬಗೆಯ ಸಿನಿಮಾ ಮಾಡಿರುವ ನಿರ್ದೇಶಕ ನರೇಂದ್ರಬಾಬು, ಮತ್ತೊಂದು ಹೊಸ ಬಗೆಯ ಚಿತ್ರ ನೀಡಿದ್ದಾರೆ.

‘ಸ್ಕ್ರಿಪ್ಟ್‌ ಬರೆದ ನಂತರ ನಾನು ಅದನ್ನು ಓದಲು ಅನಂತ್‌ನಾಗ್‌ ಅವರ ಬಳಿಕೊಟ್ಟಿದ್ದೆ. ಅವರು ಸಾಕಷ್ಟು ಸಲಹೆಗಳನ್ನು ನೀಡಿದರು. ಅಲ್ಲದೇ, ಕಥೆಗೆ ಒಪ್ಪುವಂತಹ ಒಂದಷ್ಟು ಘಟನೆಗಳನ್ನೂ ವಿವರಿಸಿದರು. ಈ ಚಿತ್ರಕ್ಕೆ ಏನು ಶೀರ್ಷಿಕೆ ಇಡಬೇಕು ಎಂದು ತಲೆಕೆಡಿಸಿಕೊಂಡಾಗ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂತ ಹೇಳಿದ್ದೇ ಅನಂತ್‌ನಾಗ್‌. ಹಾಗಾಗಿ ಸಿನಿಮಾ ಚೆನ್ನಾಗಿ ಬಂದಿದೆ ಅಂದರೆ, ಅದಕ್ಕೆ ಕಾರಣ ಅವರೇ’ ಅಂತಾರೆ ನಿರ್ದೇಶಕರು.

ಮೇ 25ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಸಿನಿಮಾ ಚೆನ್ನಾಗಿ ಮೂಡಿ ಬಂದಿರುವುದರಿಂದ ಎಲ್ಲರಿಗೂ ತಲುಪಿಸುವ ಜವಾಬ್ದಾರಿಯನ್ನೂ ಅನಂತ್‌ ತಗೆದುಕೊಂಡಿದ್ದಾರಂತೆ. ಸ್ವತಃ ಅವರೇ ವಿತರಕರಾದ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಕರೆ ಮಾಡಿ, ಚಿತ್ರವನ್ನು ವಿತರಿಸುವಂತೆ ಹೇಳಿದ್ದಾರಂತೆ. ಇದೇ ಮೇ 25ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಜತೆಗೆ ಏಕಕಾಲದಲ್ಲಿ ಪಕ್ಕದ ರಾಜ್ಯ ಹಾಗೂ ದೇಶದಲ್ಲೂ ತೆರೆಕಾಣಿಸುವ ಆಲೋಚನೆ ನಿರ್ಮಾಪಕರಾದ ಸುದರ್ಶನ್‌, ರಾಮಮೂರ್ತಿ ಹಾಗೂ ಹರೀಶ್‌ ಶೇರಿಗಾರ್‌ ಅವರದ್ದು.

ಹಿರಿಯ ನಟ ಅನಂತ್ ನಾಗ್ ಮತ್ತು ಯುವ ನಟಿ ರಾಧಿಕ ಚೇತನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕತೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ಸಿನಿಮಾ ಚಿತ್ರಕಥೆಯಲ್ಲಿ ಬಹಳ ರೋಚಕತೆಯಿಂದ ಮಾಡಿದೆ. ಅದಕ್ಕೆ ಸಾಕ್ಷಿ ಚಿತ್ರದ ಟ್ರೈಲರ್.

ಇದು ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್ ‌ನಾಗ್‌ ಅವರ ಕಥೆ ಸಾಗಿದರೆ, ಇನ್ನೊಂದು ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್‌ ರಿಲೇಷನ್ ‌ಶಿಪ್‌ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳು ಚಿತ್ರದಲ್ಲಿವೆ.

Comments are closed.