ಕ್ರೀಡೆ

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 30 ರನ್ ಗಳಿಂದ ಪರಾಭವಗೊಂಡ ಆರ್‌ಸಿಬಿ ! ಪ್ಲೇ ಆಫ್ ಕನಸು ನುಚ್ಚು ನೂರು !

Pinterest LinkedIn Tumblr

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2018 ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 30 ರನ್ ಗಳಿಂದ ಪರಾಭವಗೊಂಡಿದೆ. ಇದರೊಡನೆ ಪ್ಲೇ ಆಫ್ ಗೆ ಪ್ರವೇಶಿಸುವ ಬೆಂಗಳೂರಿನ ಕನಸು ನುಚ್ಚು ನೂರಾಗಿದೆ.

ಕನ್ನಡಿಗ ಶ್ರೇಯಸ್ (16ಕ್ಕೆ4) ಸ್ಪಿನ್‌ ಮೋಡಿಯ ಬಲದಿಂದ ಅಜಿಂಕ್ಯ ರಹಾನೆ ನಾಯಕತ್ವದ ಆರ್‌ಆರ್ ತಂಡವು 30 ರನ್‌ಗಳಿಂದ ಗೆದ್ದಿತು. ಆ ಮೂಲಕ ಪ್ಲೇ ಆಫ್‌ ಪ್ರವೇಶಿಸುವ ತನ್ನ ಕನಸಿಗೆ ಮರುಜೀವ ನೀಡಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ಬೌಲರ್‌ ಉಮೇಶ್ ಯಾದವ್ (25ಕ್ಕೆ3) ಅವರ ಶಿಸ್ತಿನ ದಾಳಿಯ ಎದುರು ರಾಜಸ್ಥಾನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 164 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಆರ್‌ಸಿಬಿಯ ಬ್ಯಾಟಿಂಗ್ ಪಡೆಯು ಮುಗ್ಗರಿಸಿತು. 19.2 ಓವರ್‌ಗಳಲ್ಲಿ 134 ರನ್ ಗಳಿಸಿ ಶರಣಾಯಿತು.

ಎಬಿ ಡಿವಿಲಿಯರ್ಸ್‌ (53; 37ಎ, 7ಬೌಂ) ಮತ್ತೊಂದು ಅರ್ಧಶತಕ ಗಳಿಸಿತು. ಪಾರ್ಥಿವ್ ಪಟೇಲ್ 33 ರನ್‌ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಉಳಿದವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲಿಲ್ಲ. ಇನಿಂಗ್ಸ್‌ ಅರಂಭಿಸಿದ ವಿರಾಟ್ ಅವರನ್ನು ಮೂರನೇ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್ ಕ್ಲೀನ್‌ ಬೌಲ್ಡ್‌ ಮಾಡಿದರು.

ಲೆಗ್‌ಸ್ಪಿನ್ನರ್ ಶ್ರೇಯಸ್ ಅವರು ಒಂಬತ್ತನೇ ಓವರ್‌ನಲ್ಲಿ ಪಾರ್ಥಿವ್ ಮತ್ತು ಮೋಯಿನ್ ಅಲಿ ಅವರ ವಿಕೆಟ್ ಕಬಳಿಸಿದರು. ಇದರಿಂದ ಚೇತರಿಸಿಕೊಳ್ಳಲು ಆರ್‌ಸಿಬಿಗೆ ಸಾಧ್ವವಾಗಲಿಲ್ಲ.

ಆದರೆ ‘ಸೂಪರ್ ಮ್ಯಾನ್’ ಎಬಿಡಿ ದಿಟ್ಟತನದಿಂದ ಬ್ಯಾಟ್‌ ಬೀಸಿದರು. ಟೂರ್ನಿಯಲ್ಲಿ ಐದನೇ ಅರ್ಧಶತಕವನ್ನು ದಾಖಲಿಸಿದರು. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಅವರು ಪಂದ್ಯಶ್ರೇಷ್ಠ ರಾಗಿದ್ದರು. ಈ ಟೂರ್ನಿಯಲ್ಲಿ ಆರ್‌ ಸಿಬಿಗೆ ಇದು ಎಂಟನೇ ಸೋಲು. 14 ಪಂದ್ಯಗಳಲ್ಲಿ ಆರರಲ್ಲಿ ಮಾತ್ರ ಗೆದ್ದಿತ್ತು.

ಹೋದ ವರ್ಷದ ಟೂರ್ನಿ ಯಲ್ಲಿಯೂ ವಿರಾಟ್ ಬಳಗವು ಲೀಗ್‌ ಹಂತದಿಂದಲೇ ಹೊರಬಿದ್ದಿತ್ತು. ರಾಜಸ್ಥಾನ್ ತಂಡವು ಈಗ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಆದರೆ, ಭಾನುವಾರ ನಡೆಯುವ ಪಂದ್ಯ ದಲ್ಲಿ ಡೆಲ್ಲಿ ತಂಡದ ಎದುರು ಮುಂಬೈ ಇಂಡಿಯನ್ಸ್‌ ಸೋತರೆ ಅಜಿಂಕ್ಯ ರಹಾನೆ ಬಳಗಕ್ಕೆ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ತ್ರಿಪಾಠಿ ಮಿಂಚು: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡಕ್ಕೆ ಎರಡನೇ ಓವರ್‌ನಲ್ಲಿಯೇ ಮಧ್ಯಮವೇಗಿ ಉಮೇಶ್ ಯಾದವ್ ಪೆಟ್ಟು ನೀಡಿದರು.

ಜೋಫ್ರಾ ಆರ್ಚರ್ ಅವರ ವಿಕೆಟ್ ಕಬಳಿಸಿದರು. ಇನ್ನೊಂದು ಬದಿಯಲ್ಲಿದ್ದ ರಾಹುಲ್ ತ್ರಿಪಾಠಿ ಅವರೊಂದಿಗೆ ಜೊತೆಯಾದ ನಾಯಕ ಅಜಿಂಕ್ಯ ರಹಾನೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 99 ರನ್‌ ಸೇರಿಸಿದರು.

14ನೇ ಓವರ್‌ನಲ್ಲಿ ಉಮೇಶ್ ಯಾದವ್ ಅಜಿಂಕ್ಯ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಡಗ್‌ಔಟ್‌ ದಾರಿ ತೋರಿಸಿದರು. ಇದರಿಂದಾಗಿ ತಂಡದ ರನ್‌ ಗಳಿಕೆ ಕುಂಠಿತವಾಯಿತು. ಆದರೆ, ತ್ರಿಪಾಠಿ (ಅಜೇಯ 80; 58ಎ, 5ಬೌಂ, 3ಸಿ) ಮಾತ್ರ ಏಕಾಂಗಿ ಹೋರಾಟ ನಡೆಸಿದರು.

Comments are closed.