ಮನೋರಂಜನೆ

ಖಾಕಿ ಉಡುಪಿನಲ್ಲಿ ಮೈತ್ರಿಯಾ ಗೌಡ

Pinterest LinkedIn Tumblr


ನಟಿ ಮೈತ್ರಿಯಾ ಗೌಡ ಮತ್ತೆ ಸುದ್ದಿಯಾಗಿದ್ದಾರೆ..! ಹಾಗಂತ ಇನ್ಯಾವುದೋ ವಿಷಯದಲ್ಲಂತೂ ಅಲ್ಲ. ಅವರೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಸಲ ಅವರು ಖಾಕಿ ಖದರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಮೈತ್ರಿಯಾ ಗೌಡ “ಆಗಂತುಕ’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತವೂ ನಡೆದಿದೆ.

ಮೈತ್ರಿಯಾಗೌಡ ಅವರಿಗೆ ರಿಯಲ್‌ ಲೈಫ್ನಲ್ಲಿ ಪೊಲೀಸ್‌ ಅಧಿಕಾರಿ ಆಗಬೇಕೆಂಬ ಆಸೆ ಇತ್ತಂತೆ. ಆದರೆ, ಅದು ಸಾಧ್ಯವಾಗಿಲ್ಲ. ಅವರ ಕನಸು ರೀಲ್‌ ಲೈಫ್ನಲ್ಲಿ ನನಸಾಗಿದೆ. ಈ ಖುಷಿ ಹಂಚಿಕೊಳ್ಳುವ ಮೈತ್ರಿಯಾಗೌಡ, “ಮೊದಲ ಸಲ ನಾನು ಖಾಕಿ ತೊಟ್ಟು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಅರಣ್ಯಾಧಿಕಾರಿ ಪಾತ್ರ. ಅದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ರಜತ್‌ ರಘುನಾಥ್‌ ಚಿತ್ರದ ನಿರ್ದೇಶಕರು.

ಈ ಹಿಂದೆ “ಓಜಸ್‌’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಜತ್‌ ರಘನಾಥ್‌, ಈ ಚಿತ್ರಕ್ಕೂ ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಿಯಲ್‌ ಲೈಫ್ನಲ್ಲಿ ನನಗೆ ಪೊಲೀಸ್‌ ಆಫೀಸರ್‌ ಆಗುವ ಆಸೆ ಇತ್ತು. ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ಗೆಳತಿಯರು ಸಿಕ್ಕಾಪಟ್ಟೆ ಹೈಟ್‌ ಇದ್ದೆವು. ಆಗ, ಪೊಲೀಸ್‌ ಇಲಾಖೆ ಸೇರುವ ಕನಸು ಕಟ್ಟಿಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಆಕಸ್ಮಿಕವಾಗಿ ಸಿನಿಮಾಗೆ ಎಂಟ್ರಿಯಾದೆ. ಅಂಥದ್ದೊಂದು ಪಾತ್ರ ನನಗೆ ಬಂದಿರಲಿಲ್ಲ. ಆಸೆಯೇನೋ ಇತ್ತು. ಆದರೆ, ಬಂದ ಪಾತ್ರ ಮಾಡುತ್ತಿದ್ದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾನು ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಅರಣ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಲೇ ಇರುತ್ತವೆ. ಆ ಕೊಲೆಯ “ಆಗಂತುಕ’ನ ಬೆನ್ನತ್ತಿ ಹೋಗುವ ಕಥೆ ಇಲ್ಲಿದೆ. ಆರಂಭದಿಂದ ಅಂತ್ಯದವರೆಗೂ ತುಂಬಾ ಗಂಭೀರವಾಗಿ ಸಾಗುವ ಪಾತ್ರ ನನ್ನದು.

ಚಿತ್ರದಲ್ಲಿ ಒಬ್ಬ ಹುಡುಗ, ಹುಡುಗಿ ಪಾತ್ರವೂ ಪ್ರಮುಖವಾಗಿದೆ. ಅರಣ್ಯದಲ್ಲಿ ಕೆಲವರ ಕೊಲೆಗಳು ನಡೆಯುತ್ತವೆ. ಆ ಕೊಲೆ ಯಾರು ಮಾಡುತ್ತಾರೆ ಎಂಬುದನ್ನು ಪತ್ತೆ ಹಚ್ಚುವ ಅರಣ್ಯಾಧಿಕಾರಿಯಾಗಿ ನಟಿಸುತ್ತಿದ್ದೇನೆ. ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನನಗಾಗಿ ಎರಡು ಭರ್ಜರಿ ಫೈಟ್‌ಗಳಿವೆ. ಅದಕ್ಕಾಗಿ ಹರೀಶ್‌ ಎಂಬುವವರು ತರಬೇತಿ ಕೊಡುತ್ತಿದ್ದಾರೆ. ಜಿಮ್ನಾಸ್ಟಿಕ್‌ ಸೇರಿದಂತೆ, ರಿಸ್ಕ್ ಫೈಟ್‌ಗೆ ಬೇಕಾದ ತರಬೇತಿಯನ್ನೂ ಪಡೆಯುತ್ತಿದ್ದೇನೆ.

ಚಿಕ್ಕಮಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಆ ಭಾಗದಲ್ಲಿ ಹಸಿರು ಬೇಕು. ಅದಕ್ಕಾಗಿ ಚಿತ್ರತಂಡ ಕಾಯುತ್ತಿದೆ. ಜೂನ್‌ನಲ್ಲಿ ಮಳೆ ಬಿದ್ದ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಚನೆ ಚಿತ್ರತಂಡಕ್ಕಿದೆ. “ಆಗಂತುಕ’ ನನ್ನ ಒಂಭತ್ತನೇ ಚಿತ್ರ. “ಅಕ್ಷತೆ’ ಬಳಿಕ “ನಾಡ ರಕ್ಷಕ’ ಎಂಬ ಚಿತ್ರ ಮಾಡಿದ್ದೆ. ಅದಾದ ಮೇಲೆ “ಡ್ಯಾಡಿ’ ಎಂಬ ಚಿತ್ರ ಒಪ್ಪಿಕೊಂಡಿದ್ದೆ. ಆದರೆ, ಅದು ಸೆಟ್ಟೇರಲಿಲ್ಲ.

ಬಹುಶಃ, “ಆಗಂತುಕ’ ಬಳಿಕ ಶುರುವಾಗಬಹುದು. ಈ ಚಿತ್ರದಲ್ಲಿ ಇನ್ನೊಂದು ವಿಶೇಷವೆಂದರೆ, ಅರಣ್ಯಾಧಿಕಾರಿಯ ಭಾಷೆ ಬಹುತೇಕ ಉತ್ತರ ಕರ್ನಾಟಕದಲ್ಲಿರುತ್ತೆ. ಇಡೀ ಚಿತ್ರ ನಾಯಕಿ ಮೇಲೆಯೇ ಸಾಗುವುದರಿಂದ, ಇದೊಂದು ನಾಯಕಿ ಪ್ರಧಾನ ಚಿತ್ರ ಎನ್ನಬಹುದು. ಮರಸುತ್ತೋ ಪಾತ್ರಗಳನ್ನು ಬಿಟ್ಟು, ಇದೇ ಮೊದಲ ಸಲ ಈ ರೀತಿಯ ಪಾತ್ರ ಮಾಡುತ್ತಿದ್ದೇನೆ. ನನಗೊಂದು ಚಾಲೆಂಜ್‌ ಸಿನಿಮಾ ಇದು ಎನ್ನುತ್ತಾರೆ ಮೈತ್ರಿಯಾ ಗೌಡ.

Comments are closed.